ಶಿವಮೊಗ್ಗ: ಬಿಹಾರ ವಿಧಾನಸಭಾ ಚುನಾವಣೆ ಮುಗಿದ ನಂತರ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ, ರಾಜಕೀಯ ವಲಯದಲ್ಲಿ ನಡೆಯುತ್ತಿರುವ ನವೆಂಬರ್ ಕ್ರಾಂತಿಯನ್ನು ಶಾಂತಿಯುತವಾಗಿ ಬಗೆಹರಿಸಲಿದ್ದಾರೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್‌ರಚನೆ ಯಾವುದೇ ನಿರ್ಧಾರವಿರಲಿ, ಹೈಕಮಾಂಡ್‌ನ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.
ರಾಜ್ಯದ ನಾಯಕರ ನಡುವೆ ಮುಖ್ಯಮಂತ್ರಿ ವಿಚಾರವಾಗಿ ಏನು ಒಪ್ಪಂದ ಆಗಿದೆ ಎಂಬುದು ನನಗೆ ತಿಳಿದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ದಲಿತ ನಾಯಕ ಅಥವಾ ಹಿಂದುಳಿದ ವರ್ಗದ ನಾಯಕರ ಆಯ್ಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಅನುಭವಿ ರಾಜಕಾರಣಿಗಳು ಸಿಎಂ ಸ್ಥಾನಕ್ಕೆ ಅಪೇಕ್ಷೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ನಿರ್ಧಾರವಾಗಿರುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕರು, ನಾನು ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಬಳಿ ನನಗೂ ಮಂತ್ರಿಯಾಗುವ ಬಯಕೆ ಇದೆ ಎಂದು ಹೇಳಿದ್ದೇನೆ. ನಾನೂ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ನನಗೂ ಸಚಿವ ಸ್ಥಾನದ ಬಯಕೆ ಇದೆ. ಇದನ್ನು ನಿರ್ಧರಿಸುವುದು ಸಂಪೂರ್ಣವಾಗಿ ಹೈಕಮಾಂಡ್‌ಗೆ ಬಿಟ್ಟ ವಿಷಯ, ಎಂದು ತಿಳಿಸಿದರು.