ರಾಯಚೂರು ಡಿಸಿ ಜೋಡಿ: ಈಗ ಎಂಪಿ ಮೋಡಿ!

KannadaprabhaNewsNetwork | Published : Jun 8, 2024 12:31 AM

ಸಾರಾಂಶ

ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದವರು ಈಗ ಅದೇ ಕ್ಷೇತ್ರ ಸಂಸತ್ ಸದಸ್ಯ. ಅದೇ ರೀತಿ ಜಿಲ್ಲೆಯ ಡಿಸಿಯಾಗಿದ್ದ ಇನ್ನೊಬ್ಬರು ತಮಿಳುನಾಡಿನಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರುತಿಂಗಳುಗಳ ಕಾಲ ಸುದೀರ್ಘವಾಗಿ ನಡೆದ ಲೋಕಸಭಾ ಚುನಾವಣೆ ಫಲಿತಾಂಶ ದೇಶಾದ್ಯಂತ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಅದೇ ರೀತಿ ಜಿಲ್ಲೆಯಲ್ಲೂ ಒಂದು ಅಚ್ಚರಿಯ ಬೆಳವಣಿಗೆಯಾಗಿದೆ. ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದವರು ಈಗ ಅದೇ ಕ್ಷೇತ್ರ ಸಂಸತ್ ಸದಸ್ಯ. ಅದೇ ರೀತಿ ಜಿಲ್ಲೆಯ ಡಿಸಿಯಾಗಿದ್ದ ಇನ್ನೊಬ್ಬರು ತಮಿಳುನಾಡಿನಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಡಿಸಿಯಾಗಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳು ಒಂದೇ ಪಕ್ಷ ಕಾಂಗ್ರೆಸ್‌ನಿಂದ ಗೆದ್ದು ಸಂಸತ್‌ ಪ್ರವೇಶಿಸಿರುವುದು ಜಿಲ್ಲೆಯ ಪ್ರಜ್ಞಾವಂತ ಮತದಾರರಲ್ಲಿ ಚರ್ಚೆ- ಕುತೂಹಲಕ್ಕೆ ಕಾರಣವಾಗಿದೆ. ಇದೇ ವಿಷಯ ಜಿಲ್ಲಾದ್ಯಂತ ಮೋಡಿ ಮಾಡಿದೆ.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲವು ಸಾಧಿಸಿರುವ ಜಿ.ಕುಮಾರ ನಾಯಕ ಮತ್ತು ತಮಿಳುನಾಡಿನ ತಿರುವೆಳ್ಳುರು ಲೋಕಸಭಾ ಕ್ಷೇತ್ರದಿಂದ ಅದೇ ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿರುವ ಎಸ್‌.ಸಸಿಕಾಂತ ಸೆಂಥಿಲ್‌ ಅವರು ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಅವರಿಬ್ಬರು ಸಂಸತ್‌ ಪ್ರವೇಶಿಸಿರುವುದು ಜಿಲ್ಲೆಯ ಸಾರ್ವಜನಿಕರಿಗೆ ಸಂಸತ ನೀಡಿದೆ.ಯಾರು ಯಾವಾಗ ಡಿಸಿಯಾಗಿದ್ದರು:

1999-2002ರ ಅವಧಿಗೆ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿ.ಕುಮಾರ ನಾಯಕ ಅವರು ಜಿಲ್ಲೆಯಿಂದ ವರ್ಗಾವಣೆಗೊಂಡ ನಂತರವೂ ಒಂದಲ್ಲಾ ಒಂದು ರೀತಿಯಲ್ಲಿ ಜಿಲ್ಲೆಯೊಂದಿಗೆ ನಿರಂತರವಾಗಿ ನಂಟನ್ನು ಇಟ್ಟುಕೊಂಡೇ ಬಂದಿದ್ದರು. ಬೆಂಗಳೂರು ಜನ್ಮಭೂಮಿಯಾಗಿದ್ದರು ರಾಯಚೂರು ಕರ್ಮಭೂಮಿ ಎಂದು ಭಾವಿಸಿದ ಕುಮಾರ ನಾಯಕ ವರ್ಗಾವಣೆಯಾಗಿ ಹೋದ ಬಳಿಕವೂ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ, ಪ್ರವಾಸೋದ್ಯಮ ಇಲಾಖೆ ಆಯುಕ್ತರಾಗಿ, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುದರೊಟ್ಟಿಗೆ ಜಿಲ್ಲೆಯೊಂದಿಗೆ ಸಂಪರ್ಕವನ್ನು ನಿರಂತರವಾಗಿ ಮುಂದುವರಿಸಿದ್ದರು. ಕಳೆದ 2023 ಸೆಪ್ಟಂಬರ್‌ನಲ್ಲಿ ನಿವೃತ್ತಿ ಹೊಂದಿ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಈ ಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಿ ಗೆದ್ದಿದ್ದಾರೆ. ಡಿಸಿಯಾಗಿದ್ದ ಅದೇ ರಾಯಚೂರು ಲೋಕಸಭಾಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ.ಅದೇ ರೀತಿ ಸಸಿಕಾಂತ ಸೆಂಥಿಲ್ ಅವರು 2014ರಿಂದ 2016 ವರೆಗೆ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಸೈ ಎನಿಸಿಕೊಂಡವರು. ನಂತರದ ದಿನಗಳಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸೆಂಥಿಲ್‌ ಅವರು ಕಾಂಗ್ರೆಸ್‌ ಪಕ್ಷ ಸೇರಿ ಭಾರತ್‌ ಜೋಡೋ, ಗ್ಯಾರಂಟಿ ಯೋಜನೆಗಳ ಯಶಸ್ವಿಯಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದರು. ಇದಾದ ಬಳಿಕ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲವು ಸಾಧಿಸಿ ಸಂಸತ್‌ ಪ್ರವೇಶಿಸುತ್ತಿದ್ದಾರೆ.

Share this article