ರಾಯಚೂರು: ಚುನಾವಣೆ ವೇಳಾಪಟ್ಟಿ ಘೋಷಣೆಯಾದ್ರೂ ಕಾವೇರದ ಕಣ

KannadaprabhaNewsNetwork | Published : Mar 20, 2024 1:18 AM

ಸಾರಾಂಶ

ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಘೋಷಿಸದ ಕಾರಣ ರಾಜಕೀಯ ಚಟುವಟಿಕೆಗಳಿಗೆ ಹಿನ್ನಡೆ, ಆಕಾಂಕ್ಷಿಗಳಲ್ಲಿ ಹೆಚ್ಚಿದ ಹೃದಯ ಬಡಿತ, ಕೊನೆ ಕ್ಷಣದಲ್ಲಿ ಪಕ್ಷಾಂತರ ಪರ್ವ ನಡೆಯುವ ಚರ್ಚೆ ನಡದಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಬಹುನಿರೀಕ್ಷಿತ ಲೋಕಸಭೆ ಚುನಾವಣೆ ಘೋಷಣೆಯಾಗಿ ಮೂರು ದಿನಗಳು ಪೂರ್ಣಗೊಂಡಿದ್ದರು ಸಹ ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯದ ಕಾವು ಕಾಣುತ್ತಿಲ್ಲ. ಇದಕ್ಕೆ ಮುಖ್ಯಕಾರಣ ಪಕ್ಷಗಳಿಂದ ಇನ್ನು ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡದೇ ಇರುವುದಾಗಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ಪಕ್ಕದ ಯಾದಗಿರಿ ಜಿಲ್ಲೆಯ ಶೋರಾಪುರ (ಸುರಪುರ) ಶಹಾಪುರ, ಯಾದಗಿರಿ ವಿಧಾನಸಭಾ ಕ್ಷೇತ್ರಗಳು ಹಾಗೂ ಜಿಲ್ಲೆಯ ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನ್ವಿ, ದೇವದುರ್ಗ ಮತ್ತು ಲಿಂಗಸುಗೂರು ವಿಧಾನಸಭಾ ಕ್ಷೇತ್ರಗಳು ಸೇರಿವೆ. ಇಡೀ ದೇಶದಲ್ಲಿ ಮಹಾಕದನ ರಣಕಹಳೆ ಶುರುವಾಗಿದ್ದರು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ರಾಜಕೀಯ ವಾತಾವರಣವು ಸಪ್ಪೆಯಾಗಿದೆ.

ಆಡಳಿತ ಚುರುಕು-ಪಕ್ಷಗಳು ಮಂಕು:

ಕಳೆದ ಮಾ.16 ಶನಿವಾರ ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಕ್ಷೇತ್ರದ ಚುನಾವಣೆ ಘೋಷಿಸುತ್ತಿದ್ದಂತೆ ಕರ್ನಾಟಕ ಸೇರಿ ದೇಶದ ಎಲ್ಲ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲಾಡಳಿತಗಳು ತಮ್ಮ ವ್ಯಾಪ್ತಿಗೆ ಬರುವ ಸರ್ಕಾರದ ಕಚೇರಿ, ಸಾರ್ವಜನಿಕ ಪ್ರದೇಶದಲ್ಲಿ ರಾಜಕೀಯ ನಾಯಕರ ಫೋಟೋಗಳು, ಬ್ಯಾನರ್-ಬಂಟಿಂಗ್, ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಗೆ ಸಂಬಂಧಿಸಿದಂತೆ ನಾನಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರೊಂದಿಗೆ ಮತ್ತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಚುನಾವಣೆ ಘೊಷಣೆಗೊಂಡಿದ್ದರು ಸಹ ಮೈತ್ರಿ ಪಕ್ಷಗಳಾದ ಜೆಡಿಎಸ್-ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿ ಇತರೆ ರಾಜಕೀಯ ಪಕ್ಷಗಳು ಹೇಳಿಕೊಳ್ಳುವಂತಹ ಚಟುವಟಿಕೆ, ಉತ್ಸಾಹ ಕಾಣುತ್ತಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಆಡಳಿತ ವರ್ಗವು ಚುರುಕು ಪಡೆದಿದ್ದರು ರಾಜಕೀಯ ಪಕ್ಷಗಳು ಮಂಕಾಗಿದ್ದರಿಂದ ಇಡೀ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚುನಾವಣೆ ವಾತಾವರಣವೇ ಕಾಣುತ್ತಿಲ್ಲ.

ಅಭ್ಯರ್ಥಿಗಳ ಘೋಷಣೆ ವಿಳಂಬ:

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್ ಅವರ ನಡುವೆ ಪೈಪೋಟಿ ನಡೆದಿದ್ದು ಯಾರಿಗೆ ಟಿಕೆಟ್‌ ದೊರೆಯಲಿದೆ ಕುತುಹಲ ಮನೆಮಾಡಿದೆ. ಕಾಂಗ್ರೆಸ್‌ ಪಕ್ಷದಿಂದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ, ಮುಖಂಡರಾದ ದೇವಣ್ಣ ನಾಯಕ ಹಾಗೂ ರವಿ ಪಾಟೀಲ್‌ ಮಧ್ಯ ಪೈಪೋಟಿಯಿದೆ. ಈಗಾಗಲೇ ಜಿ.ಕುಮಾರ ನಾಯಕ ಅವರ ಏಕೈಕ ಹೆಸರನ್ನು ರಾಜ್ಯದ ಕೈ ನಾಯಕರು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಕೊನೆಕ್ಷಣದ ಬದಲಾವಣೆಯಲ್ಲಿ ಟಿಕೆಟ್‌ ಯಾರ ಕೈ ಸೇರಲಿದೆಯೋ ಕಾದುನೋಡಬೇಕಾಗಿದೆ.

ಪಕ್ಷಾಂತರ ಪರ್ವದ ಚರ್ಚೆ:

ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳಿಲ್ಲದಿದ್ದರು ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಗಾಢವಾಗಿಯೇ ಸಾಗಿವೆ. ಈ ನಡುವೆ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ವಿಷಯದಲ್ಲಿ ಉಭಯ ಪಕ್ಷಗಳು ಕಾದುನೋಡುವ ತಂತ್ರಕ್ಕೆ ಮೊರೆಹೋಗಿವೆ. ಅದರಡಿಯಲ್ಲಿಯೇ ಪಕ್ಷಾಂತರ ಪರ್ವದ ಕಾಲವು ಬರಲಿದೆ ಚರ್ಚೆ ನಡೆದಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕೈ ತೊರೆದು ಬಿಜೆಪಿ ಸೇರಿ ಅಂದು ಕಾಂಗ್ರೆಸ್‌ನಲ್ಲಿದ್ದ ಮಾಜಿ ಸಂಸದ ಬಿ.ವಿ.ನಾಯಕ ಅವರನ್ನು ಪರಾಭವಗೊಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಹಾಲಿ ಸಂಸದರಿಗೆ ಕೋಕ್‌ ಕೊಡುವ ಪರಂಪರೆಯನ್ನು ಬಿಜೆಪಿಗರು ಮುಂದುವರೆಸಿದ್ದು, ರಾಯಚೂರು ಕ್ಷೇತ್ರಕ್ಕೆ ಅದು ಅನ್ವಯಗೊಂಡಲ್ಲಿ ರಾಜಾ ಅಮರೇಶ್ವರ ನಾಯಕ ಮತ್ತೆ ಕೈ ಕುಲುಕುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮತ್ತೊಂದೆಡೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕೊನೆಗಳಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಕೊಟ್ಟು ಬಿಜೆಪಿ ಸೇರಿ ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಬಿ.ವಿ.ನಾಯಕ ಅವರು ಪ್ರಸ್ತುತ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಲ್ಲಿ ಮುಂಚುಣಿಯಲ್ಲಿದ್ದು, ಒಂದು ವೇಳೆ ಬಿಜೆಪಿಯಲ್ಲಿ ಟಿಕೆಟ್‌ ತಪ್ಪಿದರೆ ಮತ್ತೆ ಕೈಕಡೆ ಮುಖಮಾಡಲಿದ್ದಾರೆ ಎನ್ನುವ ಸಮಾಲೋಚನೆಗಳು ಇಡೀ ಕ್ಷೇತ್ರದಾದ್ಯಂತ ಸಾಗಿವೆ.

Share this article