ರಾಜ್ಯದಲ್ಲೆ ರಾಯಚೂರಿನಲ್ಲಿ ಗರಿಷ್ಠ ತಾಪಮಾನ ದಾಖಲು : 41.4 ಡಿ.ಸೆ ಗರಿಷ್ಠ ಬೇಸಿಗೆಯ ತಾಪ

KannadaprabhaNewsNetwork | Updated : Mar 11 2025, 09:03 AM IST

ಸಾರಾಂಶ

ಸೋಮವಾರ ಪ್ರಕಟಗೊಂಡ ಹವಮಾನ ವರದಿಯಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು 41.4 ಡಿ.ಸೆ ಗರಿಷ್ಠ ಅದೇ ರೀತಿ 19 ಡಿ.ಸೆ. ಕನಿಷ್ಠ ತಾಪಮಾನ ರಾಯಚೂರು ಜಿಲ್ಲೆಯಲ್ಲಿ ದಾಖಲಾಗಿದೆ.

 ರಾಯಚೂರು : ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಿನೇ ದಿನ ಬೇಸಿಗೆಯ ತಾಪ ಜಾಸ್ತಿಯಾಗುತ್ತಿದ್ದು, ಪ್ರಸಕ್ತ ಸಾಲಿನ ಬೇಸಿಗೆ ಆರಂಭದಲ್ಲಿಯೇ 41.4 ಡಿಗ್ರಿ ಸೆಲ್ಸಿಯ್ಸ್ ಗರಿಷ್ಠ ತಾಪಮಾನ ದಾಖಲಾಗಿರುವುದರಿಂದ ಬಿಸಿಲನಾಡಿನ ಜನ ತತ್ತರಿಸಿ ಹೋಗುತ್ತಿದ್ದಾರೆ. 

ಸೋಮವಾರ ಪ್ರಕಟಗೊಂಡ ಹವಮಾನ ವರದಿಯಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು 41.4 ಡಿ.ಸೆ ಗರಿಷ್ಠ ಅದೇ ರೀತಿ 19 ಡಿ.ಸೆ. ಕನಿಷ್ಠ ತಾಪಮಾನ ರಾಯಚೂರು ಜಿಲ್ಲೆಯಲ್ಲಿ ದಾಖಲಾಗಿದ್ದು, ಉಳಿದಂತೆ ಪಕ್ಕದ ಜಿಲ್ಲೆ ಕೊಪ್ಪಳ 40.7 ಡಿ.ಸೆ, ಉತ್ತರಕನ್ನಡ & ಧಾರವಾಡ 40.5 ಡಿ.ಸೆ, ಕಲಬುರಗಿ 40.04 ಡಿ.ಸೆ ಹಾಗೂ ಬಾಗಲಕೋಟೆ 40.1 ಡಿ.ಸೆ ದಾಖಲಾಗಿದ್ದು, ರಾಜ್ಯದ ಆರು ಜಿಲ್ಲೆಗಳಲ್ಲಿ ಬೇಸಿಗೆಯ ತಾಪಮಾನ ಗರಿಷ್ಠ 40 ಡಿ.ಸೆ ದಾಟಿದೆ.

ರಣ ಬಿಸಿಲಿಗೆ ಜನ ಕಂಗಾಲು : ಗರಿಷ್ಠ ತಾಪಮಾನದಿಂದಾಗಿ ಜನರ ತಲೆ ಸುಡುತ್ತಿದೆ. ರಣ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆ ಯಿಂದಲೆಯೇ ಸೂರ್ಯನ ತಾಪ ಶುರುವಾಗುತ್ತಿರುವುದರಿಂದ ಜನ ಮನೆಯಿಂದ ಹೊರಗಡೆ ಬರುವಷ್ಟರಲ್ಲಿ ಸುಡು ಬಿಸಿಲಿಗೆ ಬಳಲಿ ಬೆಂಡಾಗುತ್ತಿದ್ದಾರೆ. ಮಧ್ಯಾಹ್ನದ ರಣ ಬಿಸಿಲು ಜನರಿಗೆ ಕಾಟಕೊಡುತ್ತಿದೆ, ಸೂರ್ಯನ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ನೆರಳನ್ನು ಹುಡುಕುತ್ತಿದ್ದು, ಹೆಲ್ಮೆಟ್, ತಂಪು ಪಾನೀಯ ಕುಡಿಯುವುದು, ಕ್ಯಾಪ್ ಧರಿಸಿ ಸಂಚರಿಸುತ್ತಿದ್ದಾರೆ.

ಇನ್ನು ಜಾಸ್ತಿ ಭೀತಿ : ಬೇಸಿಗೆ ಪ್ರಾರಂಭದಲ್ಲಿಯೇ ಬಿಸಿಲಿನ ತಾಪವು 40 ಡಿ.ಸೆ ಗಡಿದಾಟಿದೆ. ಈ ತಿಂಗಳ ಮಧ್ಯದಿಂದ ಮುಂದಿನ ಏಪ್ರಿಲ್ ಹಾಗೂ ಮೇ ಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಬೇಸಿಗೆಯ ತಾಪಮಾನಕ್ಕೆ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಲಕ್ಷಣಗಳು ಶುರುವಾಗಿವೆ. ಜನರು ಸಹ ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸುವ ಅನಿವಾರ್ಯತೆಯು ಸೃಷ್ಠಿಯಾಗಿದೆ.ಪರಿಸರದಲ್ಲಿ ಆರ್ದ್ರತೆ ಪ್ರಮಾಣವು ಜಾಸ್ತಿ:ಸೂರ್ಯನ ಸೆಕೆ ಹೆಚ್ಚಾಗುತ್ತಿರುವುದರಿಂದ ಪರಿಸರದಲ್ಲಿ ತೇವಾಂಶ ಕಡಿಮೆಯಾಗಿ ಆದ್ರತೆ ಪ್ರಮಾಣವು ಜಾಸ್ತಿಯಾಗಿದೆ ಕಳೆದ ವಾರ 50 ರಿಂದ 55 ಗರಿಷ್ಠ ಪ್ರಮಾಣದಲ್ಲಿ ದಾಖಲಾಗಿದ್ದ ಆರ್ದ್ರತೆ ಈ ವಾರವೂ 45 ರಿಂದ 50ರ ಆಸುಪಾಸಿನಲ್ಲಿ ಸಾಗಿದೆ. ರಾತ್ರಿ ಸಮಯದಲ್ಲಿ ಕನಿಷ್ಠ ಉಷ್ಣಾಂವು ಹೆಚ್ಚಾಗ ತೊಡಗಿದ್ದು, ಇದರಿಂದಾಗಿ ರಾತ್ರಿ ಮಲಗುವಾಗ ಸಕೆಯ ಅನುಭವಾಗುತ್ತಿದೆ.

ಮಣ್ಣಿನ ಮಡಿಕೆಗಳ ಮೊರೆಹೋದ ಮಂದಿ:ಒಂದು ಕಡೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಂಪು ನೀರು ಕುಡಿಯಲು ಮಂದಿ ಬಡವರ ಫ್ರೀಜ್ಡ್ ಮಣ್ಣಿನ ಮಡಿಕೆಗಳಿಗೆ ಮಾರು ಹೋಗುತ್ತಿದ್ದಾರೆ. ಕುಂಬಾರರು ತಯಾರಿಸಿದ ಮಡಿಕೆಗಳ ಜೊತೆಗೆ ರಾಜಸ್ಥಾನ ಸೇರಿ ವಿವಿಧ ರಾಜ್ಯಗಳಿಂದ ತಂದು ರೂಪಿಸಿದ ವಿವಿಧ ಮಣ್ಣಿನ ಮಡಿಕೆಗಳು, ಕೊಡ, ಔಜು ಇತರೆ ವಸ್ತುಗಳ ಖರೀದಿಯು ಮಾರುಕಟ್ಟೆಯಲ್ಲಿ ಜೋರಾಗಿದೆ. ತಾಪಮಾನದಿಂದ ತಪ್ಪಿಸಿಕೊಳ್ಳಲು ಜನರು ಮಜ್ಜಿಗೆ, ಕಬ್ಬಿನ ಹಾಲು, ಶರಬತ್, ಸೋಡಾ, ಕಲ್ಲಂಗಡಿ, ಹಣ್ಣಿನ ಜೂಸ್ ಸೇರಿ ಮತ್ತಿತರ ದೇಸಿ ವಿಧಾನಗಳ ಮೊರೆ ಹೋಗುತ್ತಿದ್ದಾರೆ.

Share this article