- 140 ಕಿ.ಮೀ. ಅಂತರದಲ್ಲಿದ್ದ ಗುಂತಕಲ್‌ನಿಂದ ಬೇರ್ಪಡಿಸಿ ದೂರದೂರಿಗೆ ಸೇರ್ಪಡೆ: ಭಾರಿ ಸಮಸ್ಯೆ
--ಏನಿದು ಸಮಸ್ಯೆ?
- ಯಾದಗಿರಿ, ರಾಯಚೂರು ಜಿಲ್ಲೆಗಳ ರೈಲು ಜಾಲ ಗುಂತಕಲ್ ವಿಭಾಗದಲ್ಲಿತ್ತು- ರಾಯಚೂರು ಜಿಲ್ಲೆಯಂದ ಆಂಧ್ರದ ಗುಂತಕಲ್ ಕೇವಲ 142 ಕಿ.ಮೀ. ದೂರದಲ್ಲಿತ್ತು
- ಬುಧವಾರ ಉದ್ಘಾಟನೆಯಾದ ವಿಶಾಖಪಟ್ಟಣಕ್ಕೆ ಈಗ ಎರಡೂ ಜಿಲ್ಲೆಗಳು ಸೇರ್ಪಡೆ- ವಿಶಾಖಪಟ್ಟಣ 800 ಕಿ.ಮೀ. ದೂರದಲ್ಲಿದೆ. ಅಲ್ಲಿಂದಲೇ ರೈಲು ಜಾಲಗಳು ನಿಯಂತ್ರಣ
- ಇದರಿಂದ ಉಭಯ ಜಿಲ್ಲೆಗಳ ರೈಲ್ವೆ ಪ್ರಯಾಣಿಕರ ದೂರಿಗೆ ಸ್ಪಂದನೆ ಸಿಗೋದೇ ಡೌಟ್--
ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರು
ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಲಯ ಸ್ಥಾಪನೆಗೆ ಕಲ್ಯಾಣ ಕರ್ನಾಟಕದ ಭಾಗದ ಜನರು ಆಗ್ರಹಿಸುತ್ತಿರುವಾಗಲೇ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ರೈಲ್ವೆ ಜಾಲವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಧವಾರವಷ್ಟೇ ಆರಂಭವಾದ ದಕ್ಷಿಣ ಕರಾವಳಿ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ದಕ್ಷಿಣ ಮಧ್ಯ ರೈಲ್ವೆ ವಲಯದ ಗುಂತಕಲ್ ವ್ಯಾಪ್ತಿಯಲ್ಲಿ ಈ ಎರಡೂ ಜಿಲ್ಲೆಗಳ ರೈಲು ಜಾಲ ಈವರೆಗೆ ಇತ್ತು. ಗುಂತಕಲ್‌ಗೆ ರಾಯಚೂರಿನಿಂದ 142 ಕಿ.ಮೀ. ದೂರ. ಆದರೆ ಇದೀಗ ಈ ಎರಡೂ ಜಿಲ್ಲೆಗಳ ಜಾಲವನ್ನು ಬರೋಬ್ಬರಿ 800 ಕಿ.ಮೀ. ದೂರದಲ್ಲಿರುವ ವಿಶಾಖಪಟ್ಟಣಂನ ದಕ್ಷಿಣ ಕರಾವಳಿ ರೈಲು ವಲಯಕ್ಕೆ ಸೇರಿಸಲಾಗಿದೆ. ಇದರ ಪರಿಣಾಮವಾಗಿ, ರಾಯಚೂರು- ಯಾದಗಿರಿ ಜಿಲ್ಲೆಯ ರೈಲ್ವೆ ಜಾಲವನ್ನು 800 ಕಿ.ಮೀ. ದೂರದಿಂದ ನಿರ್ವಹಿಸಬೇಕಾಗುತ್ತದೆ. ಏನೇ ಸಮಸ್ಯೆ ಇದ್ದರೂ ಜನರು ವಿಶಾಖಪಟ್ಟಣಕ್ಕೇ ತೆರಳಬೇಕಾಗುತ್ತದೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಈ ಅವೈಜ್ಞಾನಿಕ ತೀರ್ಮಾನಕ್ಕೆ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ರೈಲ್ವೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
30 ಲಕ್ಷ ಜನರಿಗೆ ಅನ್ಯಾಯ- ಸಂಸದ:ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಲಯ ಸ್ಥಾಪಿಸಬೇಕು ಎನ್ನುವ ದಶಕಗಳ ಬೇಡಿಕೆ ಇದ್ದರೂ ಅದನ್ನು ಕಡೆಗಣಿಸಿ ಅವೈಜ್ಞಾನಿಕವಾಗಿ ತೆಗೆದುಕೊಂಡಿರುವ ತೀರ್ಮಾನದಿಂದ ಉಭಯ ಜಿಲ್ಲೆಗಳ 30 ಲಕ್ಷ ಜನರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಸಂಸದ ಜಿ.ಕುಮಾರ ನಾಯಕ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ರೈಲ್ವೆ ವಲಯ ವಿಚಾರದಲ್ಲಿ ರಾಯಚೂರು-ಯಾದಗಿರಿ ಜಿಲ್ಲೆಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಒಕ್ಕೊರಲಿನ ಹೋರಾಟಕ್ಕೆ ರಾಜ್ಯದ ಎಲ್ಲ ಸಂಸದರೂ ಕೈ ಜೋಡಿಸಬೇಕು ಎಂದು ಕೋರಿದ್ದಾರೆ. ಉಭಯ ಜಿಲ್ಲೆಗಳನ್ನು ಸೌತ್ ಸೆಂಟ್ರಲ್ ರೈಲ್ವೆ ಜೋನ್‌ನಲ್ಲಿಯೇ ಉಳಿಸಬೇಕು. ಇಲ್ಲವೇ, ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ವಲಯದಲ್ಲಿ ಸೇರಿಸಬೇಕು ಎಂದು ಸಂಸದರು ಆಗ್ರಹಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
-----ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ದೂರದ ಆಂಧ್ರಪ್ರದೇಶದ ವಿಶಾಖಪಟ್ಟಣದ ಸೌತ್ ಕೋಸ್ಟಲ್ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಿರುವ ಕೇಂದ್ರದ ನಿರ್ಧಾರ ಸಂಪೂರ್ಣ ಅವೈಜ್ಞಾನಿಕ. ಈ ವಿಚಾರವನ್ನು ಕೈ ಬಿಡಬೇಕು ಎಂದು ರೈಲ್ವೆ ಸಚಿವರಿಗೆ ಹಲವು ಸಲ ಮನವಿ ಮಾಡಿದ್ದರು ಸ್ಪಂದನೆ ಸಿಕ್ಕಿಲ್ಲ. ನನ್ನ ಕ್ಷೇತ್ರದ ರೈಲ್ವೆ ವಿಚಾರಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲಾಗುವುದು.- ಜಿ.ಕುಮಾರ ನಾಯಕ, ಸಂಸದರು, ರಾಯಚೂರು