ಬ್ಯಾಡಗಿ: ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸಾಗಾಟ ಮಾಡುವ ರೈತರು ಮತ್ತು ವರ್ತಕರ ಅನುಕೂಲಕ್ಕಾಗಿ ರೈಲ್ವೆ ಗೂಡ್ಸ್ (ಕಾರ್ಗೋ ಬೇಸಡ್) ಟ್ರಾನ್ಸಪೋರ್ಟ್ ಆರಂಭಿಸಲು ಸಿದ್ಧವಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಡಗಿಯಲ್ಲಿ ನಭೂತೋ ನಭವಿಷ್ಯತಿ ಎನ್ನುವ ರೀತಿಯಲ್ಲಿ ವಾರ್ಷಿಕ ರು. 3 ಸಾವಿರ ಕೋಟಿ ವ್ಯವಹಾರ ನಡೆಯುತ್ತಿದೆ. ಆದರೆ ಇಲ್ಲಿನ ಮೆಣಸಿನಕಾಯಿ ದೇಶದ ಮೂಲೆ ಮೂಲೆಗೂ ತಲುಪಿಸಲು ಸರಕು ಸಾಗಾಟ ವಹಿವಾಟು ಸಾಧ್ಯವಾಗುತ್ತಿಲ್ಲ. ಅಷ್ಟಕ್ಕೂ ಬ್ಯಾಡಗಿ ಮೆಣಸಿನಕಾಯಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದು, ದೇಶದ ಪ್ರತಿ ಊರಿನಲ್ಲೂ ನಮಗೆ ಬ್ಯಾಡಗಿ ಮೆಣಸಿನಕಾಯಿ ಅವಶ್ಯವಿರುವುದಾಗಿ ಮಾತುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ವೇ ನಡೆಸುವ ಮೂಲಕ ರೈಲ್ವೆ ಗೂಡ್ಸ್ (ಕಾರ್ಗೋ ಬೇಸಡ್) ಟ್ರಾನ್ಸಪೋರ್ಟ್ ಆರಂಭಿಸುವುದಾಗಿ ತಿಳಿಸಿದರು.ಕಾರದಪುಡಿ ಫ್ಯಾಕ್ಟರಿಗಳಲ್ಲಿ ಕಾಂಕ್ರೀಟ್ ನೆಲಹಾಸು:ಮೆಣಸಿನಕಾಯಿ ವಹಿವಾಟಿನಲ್ಲಿ ಸ್ವಚ್ಛತೆ ಕಾಯ್ದುಕೊಂಡರೆ ಮಾತ್ರ ವಿದೇಶಿ ಗುಣಮಟ್ಟ ತಲುಪಲು ಸಾಧ್ಯ, ಇದರಿಂದ ನಿರ್ಭಯವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಇದೇ ದೃಷ್ಟಿಕೋನವನ್ನಿಟ್ಟುಕೊಂಡು ಈಗಾಗಲೇ ಮಾರುಕಟ್ಟೆ ಪೂರ್ತಿ ರಿಯಾಯಿತಿ ದರದಲ್ಲಿ ಅಸೈಡ್ ಯೋಜನೆಯಡಿ ಕಾಂಕ್ರೀಟಿಕರಣ ಮಾಡಲಾಗಿದೆ. ಇನ್ನೂ 2ನೇ ಹಂತದಲ್ಲಿ ಕೋಲ್ಡ್ ಸ್ಟೋರೇಜ್ ಹಾಗೂ ಕಾರದಪುಡಿ ಫ್ಯಾಕ್ಟರಿಗಳ ವ್ಯಾಪ್ತಿಯಲ್ಲಿಯೂ ಕಾಂಕ್ರೀಟಿಕರಣ ಆಗಬೇಕಾಗಿದೆ. ಆದರೆ ಪ್ರಸ್ತುತ ಅಸೈಡ್ ಯೋಜನೆ ಸ್ಥಗಿತಗೊಂಡಿದ್ದು, ಎಲ್ಲ ಕೋಲ್ಡ್ ಸ್ಟೋರೇಜ್‌ಗಳ ಮಾಲೀಕರು ಹಾಗೂ ಎಪಿಎಂಸಿ ಅಧಿಕಾರಿಗಳು ಒಪ್ಪಿದಲ್ಲಿ ನಬಾರ್ಡನಿಂದ ಅತೀ ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ಸೌಲಭ್ಯ ಕೊಡಿಸಲು ಬದ್ಧವಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವರ್ತಕರ ಸಂಘದ ಕುಮಾರಗೌಡ ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕೆಎಂಎಫ್‌ನ ಬಸವರಾಜ ಆರಬಗೊಂಡ, ಮುಖಂಡರಾದ ಶಂಕ್ರಪ್ಪ ಮಾತನವರ, ಶಂಕರಗೌಡ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಸುರೇಶ ಉದ್ಯೋಗಣ್ಣನವರ, ಮಂಜುನಾಥ ಜಾಧವ ಹಾಗೂ ಇನ್ನಿತರರಿದ್ದರು.