ಹೂಡಿಕೆ ಹೆಚ್ಚಳದಿಂದ ರೈಲ್ವೆ ಮೂಲ ಸೌಕರ್ಯದಲ್ಲಿ ಮುನ್ನಡೆ

KannadaprabhaNewsNetwork |  
Published : Feb 03, 2026, 02:15 AM IST
ಸುದ್ದಿಗೋಷ್ಠಿಯಲ್ಲಿ ನೈಋತ್ಯ ರೈಲ್ವೆ ವಲಯ ಹೆಚ್ಚುವರಿ ಮಹಾಪ್ರಬಂಧಕ ಪಿ. ಅನಂತ್ ಮಾತನಾಡಿದರು. | Kannada Prabha

ಸಾರಾಂಶ

ಅಮೃತ್ ನಿಲ್ದಾಣ ಯೋಜನೆಯಡಿಯಲ್ಲಿ ಪ್ರಯಾಣಿಕರ ಅನುಭವವನ್ನು ಆಧುನಿಕ ಹಾಗೂ ವಿಶ್ವಮಟ್ಟದ ಸೌಲಭ್ಯ ಮೂಲಕ ಮರುರೂಪಿಸಲಾಗುತ್ತಿದೆ. ₹2,110 ಕೋಟಿ ವೆಚ್ಚದಲ್ಲಿ ಕರ್ನಾಟಕದ 61 ನಿಲ್ದಾಣಗಳನ್ನು ಸಂಪೂರ್ಣ ಪುನರಾಭಿವೃದ್ಧಿಗೆ ಗುರುತಿಸಲಾಗಿದೆ. ಬಾಗಲಕೋಟೆ, ಧಾರವಾಡ, ಗದಗ, ಗೋಕಾಕ್ ರೋಡ್ ಮತ್ತು ಮುನಿರಾಬಾದ್ ಮೇಲ್ದರ್ಜೆಗೇರಿಸಲಾಗಿದ್ದು, ಲೋಕಾರ್ಪಣೆಗೊಳಿಸಲಾಗಿದೆ.

ಹುಬ್ಬಳ್ಳಿ:

2014ರ ನಂತರ ಬಜೆಟ್ ಹಂಚಿಕೆ ಮತ್ತು ನಿರಂತರ ಹೂಡಿಕೆಯಲ್ಲಿನ ಹೆಚ್ಚಳದಿಂದ ಕರ್ನಾಟಕವು ರೈಲ್ವೆ ಮೂಲ ಸೌಕರ್ಯದಲ್ಲಿ ಅಭೂತ ಪೂರ್ವ ಮುನ್ನಡೆ ಸಾಧಿಸಿದೆ ಎಂದು ನೈಋತ್ಯ ರೈಲ್ವೆ ವಲಯ ಹೆಚ್ಚುವರಿ ಮಹಾಪ್ರಬಂಧಕ ಪಿ. ಅನಂತ್ ತಿಳಿಸಿದರು.

ಇಲ್ಲಿನ ರೈಲ್‌ಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಮಾರು ₹ 52,950 ಕೋಟಿ ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ರೈಲು ಹಳಿ ನಿರ್ಮಾಣ, ನಿಲ್ದಾಣಗಳ ಸಮಗ್ರ ಪುನಾಭಿವೃದ್ಧಿ ಮತ್ತು ಪ್ರಮುಖ ಸುರಕ್ಷತಾ ಸುಧಾರಣೆ ಒಳಗೊಂಡಿದೆ ಎಂದರು.

ಅಮೃತ್ ನಿಲ್ದಾಣ ಯೋಜನೆಯಡಿಯಲ್ಲಿ ಪ್ರಯಾಣಿಕರ ಅನುಭವವನ್ನು ಆಧುನಿಕ ಹಾಗೂ ವಿಶ್ವಮಟ್ಟದ ಸೌಲಭ್ಯ ಮೂಲಕ ಮರುರೂಪಿಸಲಾಗುತ್ತಿದೆ. ₹2,110 ಕೋಟಿ ವೆಚ್ಚದಲ್ಲಿ ಕರ್ನಾಟಕದ 61 ನಿಲ್ದಾಣಗಳನ್ನು ಸಂಪೂರ್ಣ ಪುನರಾಭಿವೃದ್ಧಿಗೆ ಗುರುತಿಸಲಾಗಿದೆ. ಬಾಗಲಕೋಟೆ, ಧಾರವಾಡ, ಗದಗ, ಗೋಕಾಕ್ ರೋಡ್ ಮತ್ತು ಮುನಿರಾಬಾದ್ ಮೇಲ್ದರ್ಜೆಗೇರಿಸಲಾಗಿದ್ದು, ಲೋಕಾರ್ಪಣೆಗೊಳಿಸಲಾಗಿದೆ. ಬಾದಾಮಿ, ಅಳ್ನಾವರ, ಕೊಪ್ಪಳ ಮತ್ತು ಬಂಟವಾಳ ನಿಲ್ದಾಣಗಳು ಉದ್ಘಾಟನೆಗೆ ಸಿದ್ಧವಾಗಿವೆ. ಈ ನಿಲ್ದಾಣಗಳು ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯ, ಉತ್ತಮ ವ್ಯವಸ್ಥೆ ಮತ್ತು ಆಧುನಿಕ ಪ್ರಯಾಣ ವಾತಾವರಣವನ್ನು ಒದಗಿಸುತ್ತವೆ ಎಂದು ತಿಳಿಸಿದರು.

ಪ್ರೀಮಿಯಂ ರೈಲು ಸೇವೆಗಳ ವಿಸ್ತರಣೆಯಿಂದ ರಾಜ್ಯದ ಒಳಗೂ ಹೊರಗೂ ಸಂಪರ್ಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು 3 ಜೋಡಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣದ ವೇಗ, ಆರಾಮ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ. ಜಾಲ ವಿಸ್ತರಣೆ ಮತ್ತು ವಿದ್ಯುದೀಕರಣ ಕಾರ್ಯಗಳು ವೇಗವಾಗಿ ಮುನ್ನಡೆಯುತ್ತಿವೆ. 2014ರಿಂದ ರಾಜ್ಯದಲ್ಲಿ ಸುಮಾರು 1,750 ಕಿ.ಮೀ ಹೊಸ ರೈಲು ಹಳಿ ನಿರ್ಮಿಸಲಾಗಿದೆ, ಇದು ಶ್ರೀಲಂಕಾದ ಸಂಪೂರ್ಣ ರೈಲು ಜಾಲದ ಉದ್ದಕ್ಕಿಂತ ಹೆಚ್ಚಾಗಿದೆ. ರಾಜ್ಯದಲ್ಲಿ 3,368 ಕಿಮೀ ರೈಲು ಮಾರ್ಗ ವಿದ್ಯುದೀಕರಣಗೊಳಿಸಿದ್ದು ಸುರಕ್ಷತೆ ಮತ್ತು ಸುಗಮ ರಸ್ತೆ ರೈಲು ಸಂಪರ್ಕಕ್ಕಾಗಿ 707 ಫ್ಲೈಓವರ್‌ ಮತ್ತು ಅಂಡರ್‌ಪಾಸ್‌ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈಲು ಸುರಕ್ಷತೆಯ ಕ್ಷೇತ್ರದಲ್ಲಿ ‘ಕವಚ್’ ಎಂಬ ಅತ್ಯಾಧುನಿಕ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯನ್ನು ಹಂತ-ಹಂತವಾಗಿ ಅಳವಡಿಸಲಾಗುತ್ತಿದೆ. ಈಗಾಗಲೇ 132 ಮಾರ್ಗ ಕಿಲೋಮೀಟರ್‌ಗಳಲ್ಲಿ ಕವಚ್ ಕಾರ್ಯಾರಂಭಗೊಂಡಿದ್ದು, ಸುಮಾರು 1,500 ಮಾರ್ಗ ಕಿಲೋಮೀಟರ್‌ಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 3,610 ಮಾರ್ಗ ಕಿಲೋ ಮೀಟರ್‌ಗಳಿಗೆ ಕವಚ್ ಅಳವಡಿಕೆಗೆ ಮಂಜೂರಾಗಿದೆ ಎಂದು ವಿವರಿಸಿದರು.

ನೈಋತ್ಯ ರೈಲ್ವೆಯ ಅಧೀನದಲ್ಲಿರುವ ಗೋವಾಕ್ಕೆ 2026-27ರಲ್ಲಿ ಸರಾಸರಿ ವಾರ್ಷಿಕ ₹ 515 ಕೋಟಿ ಬಜೆಟ್ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ₹ 4,344 ಕೋಟಿ ಮೌಲ್ಯದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಾಮರ್ಥ್ಯ ವೃದ್ಧಿ, ನಿಲ್ದಾಣ ಪುನರಾಭಿವೃದ್ಧಿ ಮತ್ತು ಸುರಕ್ಷತಾ ಸುಧಾರಣೆಗಳ ಮೇಲೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಭೂ ಸ್ವಾಧೀನ ವಿಳಂಬ:

ಭೂ ಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಧಾರವಾಡ-ಬೆಳಗಾವಿ ನೂತನ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಒಟ್ಟು ₹ 927.42 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರದಿಂದ ₹ 8.54 ಕೋಟಿ ಬಿಡುಗಡೆ ಕೂಡ ಆಗಿದೆ. ಇನ್ನು ತುಮಕೂರು-ದಾವಣಗೆರೆ (ಚಿತ್ರದುರ್ಗ ಮಾರ್ಗ) ಬರೀ ಶೇ. 16ರಷ್ಟು ಭೌತಿಕ ಪ್ರಗತಿಯಾಗಿದೆ. ಶೇ. 15ರಷ್ಟು ಹಣಕಾಸಿನ ಪ್ರಗತಿಯಾಗಿದೆ. ಈ ಯೋಜನೆಗೆ ಕಳೆದ ಅವಧಿಯಲ್ಲಿ ₹ 549 ಕೋಟಿ ಹಂಚಿಕೆಯಾಗಿತ್ತು ಎಂದು ವಿವರಿಸಿದರು.

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಹಾಗೂ ವಿವಿಧ ವಿಭಾಗಗಳ ಪ್ರಧಾನ ಮುಖ್ಯಸ್ಥರು ವರ್ಚುವಲ್ ಮೂಲಕ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಶುನಾಳ ಶರೀಫರ ಪ್ರಾಧಿಕಾರ ರಚನೆಗೆ ಸಿಎಂಗೆ ಪತ್ರ ಬರೆಯುವೆ -ಸಚಿವ ಎಚ್‌.ಕೆ. ಪಾಟೀಲ
ಜಗತ್ತಿನಲ್ಲಿ ಪ್ರಮುಖ ಆಹಾರ ಉತ್ಪಾದನಾ ದೇಶ ಭಾರತ