ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ2019ರಲ್ಲಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಉಂಟಾಗಿದ್ದ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದೇ 2021ರಲ್ಲೇ ಕೋರ್ಟ್‌ಗೆ ಸಿ ರಿಪೋರ್ಟ್ ಹಾಕಿ ರೈಲ್ವೆ ಪೊಲೀಸರು ಕೈ ತೊಳೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರೈಲ್ವೆಯಲ್ಲಿ ನಡೆದ ಸ್ಪೋಟದ ಬಗ್ಗೆಯೇ ಇಲಾಖೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಆಗಿಲ್ಲ ಎಂದರೆ ರೈಲ್ವೆ ಪ್ರಯಾಣ ಎಷ್ಟು ಸುರಕ್ಷಿತ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.ಆಗಿದ್ದೇನು?
2019ರ ಅಕ್ಟೋಬರ್ 21ರಂದು ವಿಜಯವಾಡದಿಂದ ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಪ್ಲಾಸ್ಟಿಕ್ ಬಕೆಟ್ ಪಾರ್ಸಲ್ ಬಂದಿತ್ತು. ಕೆಂಪು ಬಣ್ಣದ ಕಾಗದ ಸುತ್ತಿದ್ದ ಪ್ಲಾಸ್ಟಿಕ್ ಬಕೆಟ್‌ನಲ್ಲಿ 8 ಚಿಕ್ಕಚಿಕ್ಕ ಬಾಕ್ಸ್‌ಗಳಿದ್ದವು. ಅದರಲ್ಲಿ ಕಟ್ಟಿಗೆ ತೌಡಿನಲ್ಲಿ ಲಿಂಬೆಹಣ್ಣಿನ ಗಾತ್ರದ 8 ವಸ್ತುಗಳಿದ್ದವು. ಅದರಲ್ಲಿ ಒಂದನ್ನು ಚಹಾ ಮಾರುವ ಹುಸೇನಸಾಬ ಎಂಬಾತ ಕೈಯಲ್ಲಿ ಗಟ್ಟಿಯಾಗಿ ಹಿಡಿದಾಗ ಅದು ಸ್ಫೋಟಗೊಂಡಿತ್ತು. ಇದರಿಂದ ಹುಸೇನಸಾಬನ ಅಂಗೈ ಛಿದ್ರವಾಗಿತ್ತು. ಆತನಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪತ್ತೆಯಾಗಿದ್ದ ಏಳು ಜೀವಂತ ಸ್ಪೋಟಕಗಳನ್ನು ಬಿಡಿಡಿಎಸ್ ತಂಡ (ಬಾಂಬ್ ಡಿಟೆಕ್ಟ್ ಅಂಡ್ ಡಿಸ್ಪೋಸಲ್ ಸ್ಕಾಡ್ ) ನಿಷ್ಕ್ರಿಯಗೊಳಿಸಿತ್ತು.ಈ ಪಾರ್ಸಲ್ ಬಂದಿದ್ದು ವಿಜಯವಾಡದಿಂದ. ಅದರ ಮೇಲೆ ಕೊಲ್ಲಾಪುರದ ವಿಳಾಸವಿತ್ತು ಜತೆಗೆ ಶಿವಸೇನೆಯ ಶಾಸಕರೊಬ್ಬರ ಹೆಸರಿತ್ತು.
ರಾಜ್ಯದಲ್ಲೇ ಅತ್ಯಂತ ಕೋಲಾಹಲ ಸೃಷ್ಟಿಸಿದ ಘಟನೆಯಿದಾಗಿತ್ತು. ಆದಷ್ಟು ಶೀಘ್ರವೇ ಈ ಘಟನೆಯ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವೂ ಸೂಚನೆ ನೀಡಿತ್ತು. ಎಟಿಎಸ್, ಬಾಂಬ್ ನಿಷ್ಕ್ರಿಯ ದಳ ತಂಡಗಳು ಬಂದು ಪರಿಶೀಲನೆ ನಡೆಸಿ ಹೋಗಿದ್ದವು, ಕೊನೆಗೆ ಪ್ರಕರಣದ ತನಿಖೆಯನ್ನು ರೈಲ್ವೆ ಪೊಲೀಸರಿಗೆ ವಹಿಸಲಾಗಿತ್ತು. ರಾಜ್ಯ ಸರ್ಕಾರ ಕೂಡ ಆದಷ್ಟು ಶೀಘ್ರದಲ್ಲೇ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು.ರೈಲ್ವೆ ಪೊಲೀಸರು ವಿಜಯವಾಡಾ ಹಾಗೂ ಕೊಲ್ಲಾಪುರ ನಾಲ್ಕೈದು ಸಲ ತೆರಳಿ ತನಿಖೆ ನಡೆಸಿದ್ದುಂಟು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆ ಪಾರ್ಸಲ್ ಇಟ್ಟವರು ಯಾರು? ಹೀಗೆ ಸ್ಪೋಟಕ ಇಡಲು ಕಾರಣವೇನು? ಅವರ ಉದ್ದೇಶವೇನಾಗಿತ್ತು? ಎಂಬ ಬಗ್ಗೆಯೆಲ್ಲ ಸರಿಯಾಗಿ ರೈಲ್ವೆ ಪೊಲೀಸರಿಗೆ ಗೊತ್ತೇ ಆಗಲಿಲ್ಲ ಎಂದು ಮೂಲಗಳು ತಿಳಿಸುತ್ತವೆ.
ಸಿ ರಿಪೋರ್ಟ್:ಬರೋಬ್ಬರಿ 2 ವರ್ಷಗಳ ಕಾಲ ತನಿಖೆ ನಡೆಸಿದ ರೈಲ್ವೆ ಪೊಲೀಸರಿಗೆ ಆರೋಪಿ ಯಾರು? ಆತನ ಉದ್ದೇಶವೇನಿತ್ತು? ದೊಡ್ಡ ಸಂಚು ಅಡಗಿತ್ತಾ? ಎಂಬ ಬಗ್ಗೆಯೆಲ್ಲ ಏನೊಂದು ಗೊತ್ತೆ ಆಗಲಿಲ್ಲ. ಹೀಗಾಗಿ ಆರೋಪಿ ಪತ್ತೆಯಾಗಿಲ್ಲ ಎಂದು ಕೋರ್ಟ್‌ಗೆ 2021ರ ನವೆಂಬರ್ 10ರಂದು ಸಿ ರಿಪೋರ್ಟ್ ಹಾಕಲಾಗಿದೆ. ಈ ಮೂಲಕ ರೈಲ್ವೆ ಪೊಲೀಸರು ಕೈತೊಳೆದುಕೊಂಡಿದ್ದಾರೆ.
ಆಕ್ರೋಶ:ರೈಲ್ವೆಯೊಂದರಲ್ಲಿ ಸ್ಪೋಟಕ ಪತ್ತೆಯಾಗುತ್ತವೆ. ಅವುಗಳಲ್ಲಿ ಒಂದು ನಿಲ್ದಾಣದಲ್ಲೇ ಸ್ಪೋಟಗೊಳ್ಳುತ್ತದೆ. ಆದರೂ ಅದರ ಆರೋಪಿ ಗೊತ್ತೇ ಆಗುವುದಿಲ್ಲ ಎಂದರೆ ಇದು ರೈಲ್ವೆ ಪೊಲೀಸರ ವೈಫಲ್ಯವೇ ಸರಿ. ರೈಲಿನ ಪ್ರಯಾಣ ಎಷ್ಟು ಸುರಕ್ಷಿತ. ಯಾರು ಬೇಕಾದರೂ ರೈಲಿನಲ್ಲಿ ಏನು ಬೇಕಾದರೂ ಇಟ್ಟು ಹೋಗಬಹುದೇ? ಯಾರು ಕೇಳುವುದೇ ಇಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇದೀಗ ಎದ್ದಿವೆ. ಈ ಕಾರಣದಿಂದಲೇ ಮೆಟಲ್ ಡಿಟೆಕ್ಟರ್, ಬ್ಯಾಗೇಜ್ ಸ್ಕ್ಯಾನರ್ ಸಮರ್ಪಕವಾಗಿ ಅಳವಡಿಸಬೇಕು. ಇನ್ನು ಮೇಲಾದರೂ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಪ್ರಜ್ಞಾವಂತರದ್ದು.
ಸ್ಪೋಟಕದಲ್ಲಿ ಇದ್ದಿದ್ದು ಏನು?ರೈಲ್ವೆ ನಿಲ್ದಾಣದಲ್ಲಿ ಸ್ಫೋಟವಾದ ಸ್ಫೋಟಕದಲ್ಲಿ ಪೊಟಾಸಿಯಂ, ಕ್ಲೋರೈಡ್, ಸಲ್ಪೇಟ್, ಸಲ್ಪರ್, ಅಲ್ಯುಮಿನಿಯಂ ಸೇರಿದಂತೆ ಇತರೆ ಸ್ಫೋಟಕ ವಸ್ತುಗಳಿದ್ದವಂತೆ. ಇವುಗಳನ್ನು ಹಂದಿ ಸೇರಿದಂತೆ ವಿವಿಧ ಪ್ರಾಣಿಗಳನ್ನು ಕೊಲ್ಲಲು ಅಥವಾ ಹೆದರಿಸಲು ಬಳಸಲಾಗುತ್ತಿದೆಯಂತೆ. ಎಫ್‌ಎಸ್‌ಎಲ್ ವರದಿ ಮೂಲಕ ಈ ಅಂಶ ಗೊತ್ತಾಗಿದೆ.
2019ರಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ್ದ ಸ್ಪೋಟ ಪ್ರಕರಣದ ಕುರಿತಂತೆ ಕೋರ್ಟ್‌ಗೆ ಸಿ ರಿಪೋರ್ಟ್ ಸಲ್ಲಿಕೆಯಾಗಿದೆಯಂತೆ. 2021ರಲ್ಲಿ ರಿಪೋರ್ಟ್ ಸಲ್ಲಿಕೆಯಾಗಿದೆ. ಆದರೆ ಆರೋಪಿಯನ್ನೇ ಪತ್ತೆ ಹಚ್ಚಲು ಆಗಿಲ್ಲವೆಂದರೆ ಹೇಗೆ? ಈ ಬಗ್ಗೆ ಸರಿಯಾಗಿ ತನಿಖೆ ನಡೆದಿಲ್ಲ ಎಂದೇ ಅರ್ಥವಲ್ಲವೇ ಎಂದು ಪ್ರಶ್ನಿಸುತ್ತಾರೆ ರೈಲ್ವೆ ಪ್ರಯಾಣಿಕ ಮಂಜುನಾಥ ಪಾಟೀಲ.