2027 ರ ಅಂತ್ಯಕ್ಕೆ 2 ರೈಲ್ವೆ ಕಾಮಗಾರಿಗಳು ಪೂರ್ಣ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

KannadaprabhaNewsNetwork |  
Published : Aug 16, 2026, 02:15 AM IST
್ಿ್ಿ | Kannada Prabha

ಸಾರಾಂಶ

ಹಾಗೆಯೇ ತುಮಕೂರು- ದಾವಣಗೆರೆ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 2 ತಾಲೂಕುಗಳ ಒಟ್ಟು 35 ಗ್ರಾಮಗಳ ಮೂಲಕ 58.69 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 845 ಎಕರೆ ಜಮೀನಿನ ಪೈಕಿ ಈವರೆಗೂ 816 ಎಕರೆ ಅಂದರೆ ಶೇಕಡ 97ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು- ರಾಯದುರ್ಗ ಹಾಗೂ ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು 2027ರ ಡಿಸೆಂಬರ್ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಅವರು ತುಮಕೂರಿನ ಎಂ.ಜಿ. ಸ್ಟೇಡಿಯಂನಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ತುಮಕೂರು- ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 4 ತಾಲೂಕುಗಳ ಒಟ್ಟು 77 ಗ್ರಾಮಗಳ ಮೂಲಕ 104.02 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 1369 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಈಗಾಗಲೇ ಶೇಕಡ 99.9ರಷ್ಟು ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಹಾಗೆಯೇ ತುಮಕೂರು- ದಾವಣಗೆರೆ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 2 ತಾಲೂಕುಗಳ ಒಟ್ಟು 35 ಗ್ರಾಮಗಳ ಮೂಲಕ 58.69 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 845 ಎಕರೆ ಜಮೀನಿನ ಪೈಕಿ ಈವರೆಗೂ 816 ಎಕರೆ ಅಂದರೆ ಶೇಕಡ 97ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.

ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಜಿಲ್ಲೆಯ 8 ತಾಲೂಕುಗಳಲ್ಲಿ ಒಟ್ಟು 197 ಗ್ರಾಮಗಳ ಮೂಲಕ 163 ಕಿ.ಮೀ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಅವಶ್ಯಕವಾದ 3,118 ಎಕರೆ ಜಮೀನಿನ ಪೈಕಿ ಶೇ.97ರಷ್ಟು ಭೂ ಸ್ವಾಧೀನಪಡಿಸಿಕೊಂಡು ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಹೇಮಾವತಿ ನಾಲಾ ಯೋಜನೆಯು ಜಿಲ್ಲೆಯ ಕೆರೆಗಳಿಗೆ ಅಂತರ್ಜಲ ಉತ್ತೇಜನಕ್ಕಾಗಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಗುರುತ್ವಾಕರ್ಷಣ ಕಾಲುವೆಗಳ ಮೂಲಕ 5 ತಾಲೂಕುಗಳ ಒಟ್ಟು 94 ಗ್ರಾಮಗಳಿಗೆ ನೀರೊದಗಿಸಲು ಲಿಂಕ್ ಕೆನಾಲ್ ಯೋಜನೆ ಸೇರಿ ಒಟ್ಟು 515 ಎಕರೆ ಜಮೀನಿನ ಪೈಕಿ ಶೇಕಡ 75ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭೂ ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಜೂನ್ ಮಾಹೆಯಿಂದ ಈವರೆಗೂ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜೂನ್ ಮಾಹೆಯಲ್ಲಿ ಶೇ.20 ರಷ್ಟು ಹಾಗೂ ಜುಲೈ ಮಾಹೆಯಲ್ಲಿ ಶೇ. 75ರಷ್ಟು ಮಳೆ ಕೊರತೆಯಾಗಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಬೆಳೆಗಳು ರೈತರ ಕೈತಪ್ಪಿ ಹೋಗಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ಎದುರಾಗಿದೆ ಎಂದರು.

ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಬರಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ಬರ ನಿರ್ವಹಣೆಯ ನೆರವು ಕೋರಿ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 3.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜಿಲ್ಲೆಯ 20185 ರೈತರಿಗೆ 7837೭ ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದೆ ಎಂದ ಅವರು, ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರ ಸರ್ವತೋಮುಖ ಅಭಿವೃದ್ಧಿಗೆ 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ, ಜೇನು ಸಾಕಾಣಿಕೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಗಳಡಿ ₹29 ಕೋಟಿ ಅಂದಾಜು ವೆಚ್ಚದಲ್ಲಿ 6862 ಫಲಾನುಭವಿಗಳಿಗೆ ಸಹಾಯಧನ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಒಟ್ಟು 5 ಹಂತಗಳಲ್ಲಿ ಶಿರಾ ತಾಲೂಕು ಸೇರಿದಂತೆ ತುಮಕೂರು ತಾಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಚೆನ್ನೆೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗಳಿಗಾಗಿ ಒಟ್ಟು 10151 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಸ್ವಾಧೀನಗೊಂಡ ಜಮೀನುಗಳಿಗೆ ಈವರೆವಿಗೆ ಒಟ್ಟು ₹1168 ಕೋಟಿ ಪರಿಹಾರ ಪಾವತಿಸಲಾಗಿದ್ದು, 6ನೇ ಹಂತದ 4731 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಜೆಎಂಸಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಹಕ್ಕುಪತ್ರ ವಿತರಣಾ ಅಭಿಯಾನದಡಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಗ್ರಾಮವಾಗಿ ರಚಿಸಲು ಈವರೆಗೂ ಗುರುತಿಸಲಾಗಿರುವ ದಾಖಲೆ ರಹಿತ 1312 ಜನವಸತಿ ಪ್ರದೇಶಗಳ ಪೈಕಿ ಈವರೆಗೂ ಸರ್ಕಾರದಿಂದ 945 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹಾಗೂ 848 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯಾಗಿದೆ. ಉಳಿದ ಗ್ರಾಮಗಳು ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲು ಬಾಕಿ ಇದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದರು.

ತುಮಕೂರು ಮಹಾನಗರಪಾಲಿಕೆ ಒಳಗೊಂಡಂತೆ ಜಿಲ್ಲೆಯ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟಾರೆ 192 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದ್ದು, ನಗರ ಆಶ್ರಯ ಸಮಿತಿಯ ಮೂಲಕ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆ ಹಾಗೂ ನಾಡಿನ ಸಮಸ್ತ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯೂ ದಸರಾ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ಕೊರಟಗೆರೆ ತಾಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮತ್ತು ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದ್ದು, ಮಧುಗಿರಿ ತಾಲೂಕಿನ ರಾಜೀವ್ ಗಾಂಧಿ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶಗೌಡ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಎಸ್ಪಿ ಅಶೋಕ್ ಕುಮಾರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಕೂಟಿ ಖಾಸಗಿ ಬಸ್‌ ಡಿಕ್ಕಿ: ವಿದ್ಯಾರ್ಥಿನಿ ಸಾವು
ವಿಶ್ವದಲ್ಲೇ ಭಾರತದ ಯುವ ಜನಾಂಗ ಬಲಿಷ್ಠ: ಶಾಸಕ ಕೆ.ಎನ್.ರಾಜಣ್ಣ