ಹಾವೇರಿ ಜಿಲ್ಲೆಯ ವಿವಿಧೆಡೆ ಆಲಿಕಲ್ಲು, ಗಾಳಿ ಸಹಿತ ಸುರಿದ ಮಳೆ

KannadaprabhaNewsNetwork |  
Published : Mar 25, 2026, 02:15 AM IST
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಆಲಿಕಲ್ಲು ಮಳೆಯಾಗುತ್ತಿರುವ ದೃಶ್ಯ. | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯ ವಿವಿಧೆಡೆ ಗುಡುಗು ಮಿಂಚು, ಗಾಳಿಯ ಆರ್ಭಟ, ಆಲಿಕಲ್ಲು ಸಹಿತ ಮಂಗಳವಾರ ಸಂಜೆ ಮಳೆಯಾಗಿದೆ.

ಹಾವೇರಿ:ಜಿಲ್ಲೆಯ ವಿವಿಧೆಡೆ ಗುಡುಗು ಮಿಂಚು, ಗಾಳಿಯ ಆರ್ಭಟ, ಆಲಿಕಲ್ಲು ಸಹಿತ ಮಂಗಳವಾರ ಸಂಜೆ ಮಳೆಯಾಗಿದೆ.

ಬ್ಯಾಡಗಿ ಪಟ್ಟಣ, ಮೋಟೆಬೆನ್ನೂರು, ಹಾನಗಲ್ಲ, ಹಿರೇಕೆರೂರು, ಹಾವೇರಿ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಂಗಳವಾರ ಸಂಜೆ ಗಾಳಿ, ಗುಡುಗು ಮಿಂಚಿನೊಂದಿಗೆ ಮಳೆಯಾಗಿದೆ. ಬ್ಯಾಡಗಿ, ಹಾನಗಲ್ಲ ತಾಲೂಕುಗಳಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದೆ. ಸುಮಾರು ಒಂದು ಗಂಟೆ ಕಾಲ ಭಾರಿ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

ಬೆಳಗ್ಗೆಯಿಂದ ಸಂಜೆ ವರೆಗೂ ಬಿಲಿಸಿನ ವಾತಾವರಣದಿಂದ‌ ಕೂಡಿತ್ತು.‌ ಸಂಜೆ ಏಕಾಏಕಿ ಭಾರಿ ಗಾಳಿಯೊಂದಿಗೆ ಮಳೆಯಾಗಿದೆ. ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಮಳೆಯಾಗಿದ್ದು ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಸಮಸ್ಯೆ ಎದುರಿಸುವಂತಾಯಿತು. ಮೋಟೆಬೆನ್ನೂರ ಭಾಗದಲ್ಲಿ ಸಹ ಭಾರಿ ಗಾಳಿಯೊಂದಿಗೆ ಕೆಲಕಾಲ ಆಲಿಕಲ್ಲು ಮಳೆಯಾಗಿದೆ.

ಹಿರೇಕೆರೂರು ತಾಲೂಕಿನ ಹಂಸಭಾವಿಯಲ್ಲಿ ಆಲಿಕಲ್ಲು‌ ಮಳೆಯಾಗಿದೆ.‌ ಹಾವೇರಿ ನಗರದಲ್ಲಿ ಸಂಜೆ ಏಕಾಏಕಿ ಭಾರಿ ಗಾಳಿ, ಗುಡುಗು ಸಹಿತ ಕೆಲ ಮಳೆ ಹನಿಗಳು ಸುರಿದಿವೆ. ಭಾರಿ ಗಾಳಿ ಬೀಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದಲ್ಲಿ ಕೆಲ ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ರಭಸದ ಗಾಳಿಗೆ ಕೆಲವು ಕಡೆ ಗಿಡಮರಗಳು ಉರುಳಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ರೈತರು ಈ ಮಳೆಯಿಂದ ಕೆಲವು ಮಟ್ಟಿಗೆ ಆತಂಕಗೊಂಡಿದ್ದಾರೆ. ಬೆಳೆಗಳ ಮೇಲೆ ಗಾಳಿಯ ಪರಿಣಾಮ ಕಂಡುಬಂದಿದ್ದು, ಕೆಲವು ಬೆಳೆಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ. ನೀರಿನ ಕೊರತೆಯಿಂದ ಬಳಲುತ್ತಿದ್ದ ಪ್ರದೇಶಗಳಿಗೆ ಈ ಮಳೆ ಸ್ವಲ್ಪ ಮಟ್ಟಿಗೆ ಉಪಶಮನ ನೀಡಿದೆ.

ಜಿಲ್ಲೆಯ ರಾಣಿಬೆನ್ನೂರ, ಶಿಗ್ಗಾಂವಿ, ಸವಣೂರು, ರಟ್ಟೀಹಳ್ಳಿ ಭಾಗದ ಹಲವಡೆ ಸ್ವಲ್ಪ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಮೆಕ್ಕೆಜೋಳ, ರಾಗಿ, ಭತ್ತ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳ ಒಕ್ಕಲುತನದಲ್ಲಿ ತೊಡಗಿದ್ದ ರೈತರು ಸಮಸ್ಯೆ ಎದುರಿಸುವಂತಾಯಿತು.ಮಾವು ಬೆಳೆಗಾರರು ಆಲಿಕಲ್ಲು ಮಳೆಯಿಂದ ಕಂಗಾಲಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳು ಸಂಸ್ಕೃತಿ ಜೀವಾಳ
ಬಳ್ಳಾರಿ- ವಿಜಯನಗರ ಜಿಲ್ಲೆಗಳಿಗೆ ಬಸ್‌ ನೀಡಲು ಆಗ್ರಹ