ಮಳೆ: ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ಸೂಚನೆ

KannadaprabhaNewsNetwork |  
Published : May 22, 2025, 12:47 AM IST
ಸಭೆಯಲ್ಲಿ ಮಾತನಾಡುತ್ತಿರುವ ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್‌ | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಸಂಭಾವ್ಯ ಪ್ರವಾಹ ಹಾಗೂ ಮುಳುಗಡೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ಸಹಿಸಲಾಗದು: ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಸಂಭಾವ್ಯ ಪ್ರವಾಹ ಹಾಗೂ ಮುಳುಗಡೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಮಳೆಗಾಲದಲ್ಲಿ ಮುಳುಗಡೆಯಾದ ಪ್ರದೇಶಗಳಲ್ಲಿ ಈ ಬಾರಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತಹ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ ನೀರಿನ ಹರಿವಿಗೆ ತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲಾಗದು:

ಮಾನವ ನಿರ್ಲಕ್ಷ್ಯದಿಂದ ಯಾವುದೇ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಭೂಕುಸಿತ, ಪ್ರವಾಹ ಸೇರಿದಂತೆ ಅಪಾಯಕಾರಿ ಸ್ಥಳಗಳನ್ನು ಮೊದಲೇ ಗುರುತಿಸಿ ರೆಡ್ ಅಲರ್ಟ್ ಸಮಯದಲ್ಲಿ ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸಬೇಕು. ಪ್ರಾಕೃತಿಕ ದುರಂತ ನಡೆದರೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು. ವಿಪತ್ತು ನಿರ್ವಹಣೆ ಕಾರ್ಯದಲ್ಲಿ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ.ಆನಂದ್‌ ಎಚ್ಚರಿಸಿದರು.

ಗ್ರಾಮ ಕರಣಿಕರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು. ಕಂಟ್ರೋಲ್ ರೂಂ 24 ಗಂಟೆಯೂ ಚಾಲನೆಯಲ್ಲಿರಬೇಕು. ಮಳೆಗಾಲದಲ್ಲಿ ಮರ ಹಾಗೂ ವಿದ್ಯುತ್ ಲೈನ್‌ಗಳಿಂದ ಯಾವುದೇ ಸಮಸ್ಯೆ ಅಥವಾ ಪ್ರಾಣ ಹಾನಿ ಆಗದಂತೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಮರಗಳು ಹಾಗೂ ವಿದ್ಯುತ್ ಲೈನ್‌ಗಳನ್ನು ತೆರವುಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‍ವಾರು ವಿಪತ್ತು ಸಮಿತಿಗಳನ್ನು ಸಕ್ರಿಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆದ್ದಾರಿಯಲ್ಲಿ ನೀರು ನಿಲ್ಲಬಾರದು:

ಹೆದ್ದಾರಿಗಳಲ್ಲಿ ನೀರು ನಿಲ್ಲದಂತೆ ಎರಡು ಬದಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಶಾಲೆ ಮತ್ತು ಅಂಗನವಾಡಿಗಳ ಶಿಥಿಲಗೊಂಡಿರುವ ಕಟ್ಟಡಗಳನ್ನು ಕೂಡಲೆ ತೆರವುಗೊಳಿಸಬೇಕು. ಶಾಲೆಗಳಲ್ಲಿ ಮಕ್ಕಳು ವಿದ್ಯುತ್ ಸ್ವಿಚ್, ಕೇಬಲ್‍ಗಳನ್ನು ಮುಟ್ಟದಂತೆ ಶಿಕ್ಷಕರು ನಿಗಾ ವಹಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ಪಾಠ ಪ್ರವಚನ ಮಾಡಬಾರದು ಎಂದು ತಿಳಿಸಿದರು.

ಏರ್‌ಪೋರ್ಟ್ ನೀರು ಅವಾಂತರ:

ಮಂಗಳೂರು ವಿಮಾನ ನಿಲ್ದಾಣದ ರನ್ ವೇಯಿಂದ ಮಳೆ ನೀರು ತಗ್ಗು ಪ್ರದೇಶದ ಬಂದು ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಸ್ಥಳೀಯರಿಗೆ ವಿಶ್ವಾಸ ಮೂಡಿಸುವಂತೆ ಜಿಲ್ಲಾಧಿಕಾರಿ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಏರ್‌ಪೋರ್ಟ್ ಅಧಿಕಾರಿಗಳು, ರನ್ ವೇಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಎನ್.ಐ.ಟಿ.ಕೆ.ಯೊಂದಿಗೆ ತಾಂತ್ರಿಕ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕುಡಿಯುವ ನೀರು ಪರೀಕ್ಷೆ:

ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿ ಸರಬರಾಜು ಮಾಡುವ ಕುಡಿಯುವ ನೀರನ್ನು 15 ದಿನಕ್ಕೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು. ಕುಡಿಯುವ ನೀರಿನ ಪೈಪ್ ಹಾಗೂ ಚರಂಡಿ ನೀರು ಸಂಪರ್ಕವಾಗದಂತೆ ಗಮನ ಹರಿಸಬೇಕು. ನೀರು ಸರಬರಾಜಿಗೆ ಯಾವುದೇ ವಸ್ತು ಸೇರದಂತೆ ಎಲ್ಲ ಗ್ರಾಮ ಪಂಚಾಯ್ತಿ ಹಾಗೂ ನಗರ ಸಂಸ್ಥೆಗಳು ನಿಗಾ ವಹಿಸಲು ಸೂಚೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್‌, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ, ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ತಹಸೀಲ್ದಾರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!