ಯುಗಾದಿಯಂದು ಸುರಿದ ಮಳೆ ಗಾಳಿಗೆ ವಿವಿಧೆಡೆ ಹಾನಿ

KannadaprabhaNewsNetwork | Published : Apr 1, 2025 12:49 AM

ಸಾರಾಂಶ

ಬಾಳೆಹೊನ್ನೂರು, ವಿಶ್ವಾವಸು ಸಂವತ್ಸರದ ಯುಗಾದಿಯ ಮೊದಲ ದಿನ ಬಾಳೆಹೊನ್ನೂರು ಸೇರಿದಂತೆ ವಿವಿಧೆಡೆ ಸುರಿದ ಗಾಳಿ, ಮಳೆಗೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ.

೩೦೦ಕ್ಕೂ ಅಧಿಕ ಹೆಂಚುಗಳು ಗಾಳಿ ಹೊಡೆತಕ್ಕೆ ಸಿಕ್ಕಿ ಹಾನಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿಶ್ವಾವಸು ಸಂವತ್ಸರದ ಯುಗಾದಿಯ ಮೊದಲ ದಿನ ಬಾಳೆಹೊನ್ನೂರು ಸೇರಿದಂತೆ ವಿವಿಧೆಡೆ ಸುರಿದ ಗಾಳಿ, ಮಳೆಗೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ.ಯುಗಾದಿ ದಿನವಾದ ಭಾನುವಾರ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಗುಡುಗು, ಗಾಳಿ ಸಹಿತ ಬಾರೀ ಪ್ರಮಾಣದ ಮಳೆ ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಗಾಳಿಯ ರಭಸಕ್ಕೆ ರಂಭಾಪುರಿ ಪೀಠದ ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಆರ್‌ಸಿಸಿ ಮೇಲ್ಭಾಗದಲ್ಲಿ ಹಾಕಿದ್ದ ಶೀಟುಗಳು ಹಾರಿ ಹೋಗಿ ಮತ್ತೊಂದು ಬದಿಯ ಖಾಸಗಿ ತೋಟಕ್ಕೆ ಹೋಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ.ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಮಂದಿರ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಸ್ಥಾನದ ಮೇಲ್ಚಾವಣಿಯ ೩೦೦ಕ್ಕೂ ಅಧಿಕ ಹೆಂಚುಗಳು ಗಾಳಿ ಹೊಡೆತಕ್ಕೆ ಸಿಕ್ಕಿ ಹಾನಿಯಾಗಿದೆ. ಅರಳೀಕೊಪ್ಪ ಸಮೀಪದ ಕೋಣೆಮನೆ ಎಂಬಲ್ಲಿ ಬೃಹತ್ ಗಾತ್ರದ ಮರ ಉರುಳಿ ಹತ್ತಾರು ವಿದ್ಯುತ್ ಕಂಬಗಳು ಧರೆ ಗುರುಳಿವೆ. ರಂಭಾಪುರಿ, ಮೆಣಸುಕೊಡಿಗೆ, ಸೀಕೆ, ಮುದುಗುಣಿ, ಸಿಆರ್‌ಎಸ್ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಸಹ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಸಂಪರ್ಕ ಕಡಿತಗೊಂಡಿವೆ. ಬಾರೀ ಗಾಳಿ ಪರಿಣಾಮ ಹಲವು ತೋಟಗಳಲ್ಲಿ ಮರಗಳು ಉರುಳಿ ಬಿದ್ದಿವೆ.ಬಾರೀ ಪ್ರಮಾಣದಲ್ಲಿ ಒಮ್ಮೆಲೆ ಮಳೆ ಬಂದ ಕಾರಣ ಚರಂಡಿಗಳು ಉಕ್ಕಿ ಹರಿದು ಮುಖ್ಯರಸ್ತೆಯಲ್ಲಿ ಮಳೆ ನೀರು, ಕಸ, ಕಲ್ಲು ಕಡ್ಡಿ ಬಂದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.೩೧ಬಿಹೆಚ್‌ಆರ್ ೩: ಬಾಳೆಹೊನ್ನೂರು ರಂಭಾಪುರಿ ಪೀಠದ ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಆರ್‌ಸಿಸಿ ಮೇಲ್ಭಾಗದಲ್ಲಿ ಹಾಕಿದ್ದ ಶೀಟುಗಳು ಮಳೆ, ಗಾಳಿಗೆ ಹಾರಿ ಹೋಗಿ ಮತ್ತೊಂದು ಬದಿಯ ಖಾಸಗಿ ತೋಟಕ್ಕೆ ಹೋಗಿ ಬಿದ್ದಿದೆ.

೩೧ಬಿಹೆಚ್‌ಆರ್ ೪: ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದಲ್ಲಿ ಮಳೆ, ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Share this article