ಮಂಗಳೂರು : ಕರಾವಳಿಯಲ್ಲಿ ವರ್ಷಧಾರೆ ಮುಂದುವರಿದಿದೆ. ದಿನವಿಡೀ ಧಾರಾಕಾರ ಮಳೆ ಸುರಿದಿದ್ದು, ಇನ್ನೂ ಎರಡು ದಿನಗಳ ವರೆಗೆ ರೆಡ್ ಅಲರ್ಟ್ ಮುಂದುವರಿಯಲಿದೆ.
ಧಾರಾಕಾರ ಮಳೆಗೆ ಸಕಲೇಶಪುರ ದೋಣಿಗಲ್ ಬಳಿ ಗುಡ್ಡ ಕುಸಿತಗೊಂಡು ಹೆದ್ದಾರಿ ಸಂಚಾರ ಬಂದ್ ಆಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಧ್ಯಾಹ್ನ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಹನಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ಬಗ್ಗೆ ಮಾಣಿ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ಅಳವಡಿಸಿ ಬ್ಯಾನರ್‌ನಲ್ಲಿ ಸೂಚನೆ ನೀಡಲಾಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ಮಧ್ಯೆ ಸುತ್ತು ಬಳಸಿ ಸಂಚರಿಸುವಂತಾಗಿದೆ.
ನದಿಗಳು ಅಪಾಯ ಮಟ್ಟದಲ್ಲಿ:
ಎಡೆಬಿಡದೆ ಸುರಿದ ಮಳೆಯಿಂದಾಗಿ ಉಪ್ಪಿನಂಗಡಿಯ ನೇತ್ರಾವತಿ ಹಾಗೂ ಕುಮಾರಧಾರ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಬುಧವಾರ ರಾತ್ರಿಯಿಂದ ನಸುಕಿನ ಜಾವದ ವರೆಗೆ ನಿರಂತರ ಮಳೆಯಾಗಿದ್ದು, ಇದರಿಂದಾಗಿ ಗುರುವಾರ ಬೆಳಗ್ಗೆ ಉಪ್ಪಿನಂಗಡಿಯಲ್ಲಿ ನದಿ ನೀರು ಅಪಾಯ ಮಟ್ಟ 29 ಮೀಟರ್ ಮೀರಿ 29.1 ಮೀಟರ್‌ನಷ್ಟು ಎತ್ತರದಲ್ಲಿ ಹರಿದಿದೆ. ನದಿ ತೀರ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದ್ದು, ದಿನಪೂರ್ತಿ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ನಿಗಾ ಇರಿಸುತ್ತಿದ್ದಾರೆ.
ಗುರುವಾರ ಸಂಜೆ ವೇಳೆಗೆ ಮಂಗಳೂರಲ್ಲಿ ಮಳೆ ತುಸು ಕಡಿಮೆಯಾದರೂ ಗ್ರಾಮೀಣ ಭಾಗದಲ್ಲಿ ನಿರಂತರ ಮಳೆಯಾಗಿದೆ. ಭಾರಿ ಮಳೆಗೆ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳು ಕೆಟ್ಟು ಹೋಗಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನೂ 2 ದಿನ ರೆಡ್ ಅಲರ್ಟ್: ಭಾರತೀಯ ಹವಾಮಾನ ಇಲಾಖೆ ಜು.19 ಮತ್ತು 20ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಅಬ್ಬರದ ಮಳೆ ಮತ್ತೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.
ಬೆಳ್ತಂಗಡಿ ಗರಿಷ್ಠ ಮಳೆ:
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 134.8 ಮಿಲಿ ಮೀಟರ್ ಗರಿಷ್ಠ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 100.9 ಮಿ.ಮೀ. ಆಗಿದೆ.
ಬಂಟ್ವಾಳ 91.3 ಮಿ.ಮೀ, ಮಂಗಳೂರು 77.8 ಮಿ.ಮೀ, ಪುತ್ತೂರು 83.1 ಮಿ.ಮೀ, ಸುಳ್ಯ 80.2 ಮಿ.ಮೀ, ಮೂಡುಬಿದಿರೆ 80.5 ಮಿ.ಮೀ, ಕಡಬ 104.1 ಮಿ.ಮೀ., ಮೂಲ್ಕಿ 57.7 ಮಿ.ಮೀ, ಉಳ್ಳಾಲ 91.7 ಮಿ.ಮೀ. ಮಳೆಯಾಗಿದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.60 ಮೀಟರ್(ಅಪಾಯ ಮಟ್ಟ 31.5 ಮೀಟ್) ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 7.3 ಮೀಟರ್(ಅಪಾಯ ಮಟ್ಟ 8.5 ಮೀಟ್) ನಲ್ಲಿ ಹರಿಯುತ್ತಿದೆ. ನೆರೆಗೆ ಬಂಟ್ವಾಳದಲ್ಲಿ 3.576 ಎಕರೆ ಕೃಷಿಭೂಮಿ ಹಾನಿಗೀಡಾಗಿದೆ. ಅಪಾಯದ ಬಂಡೆ ಬಗ್ಗೆ ಸಂದೇಶ: ನಗರದ ನಂತೂರು ಜಂಕ್ಷನ್ ಬಳಿ ಎಡಗಡೆಗೆ ದೊಡ್ಡ ಬಂಡೆಯೊಂದು ಹೆದ್ದಾರಿಗೆ ಬೀಳುವ ಅಪಾಯದ ಬಗ್ಗೆ ಜಾಲತಾಣಗಳಲ್ಲಿ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಕಮಾಂಡ್ ಕಂಟ್ರೋಲ್ ರೂಮ್‌ನ ಹಿರಿಯ ಅಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಡೆಯ ಪ್ರದೇಶ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದು, ಈ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಆ ಬಂಡೆ ನಾಲ್ಕೈದು ವರ್ಷಗಳಿಂದ ಹಾಗೆಯೇ ಇದ್ದು, ಅಪಾಯದ ಸಾಧ್ಯತೆ ಕಂಡುಬಂದಿಲ್ಲ. ಅಲ್ಲದೆ ಅಲ್ಲೇ ಸ್ವಲ್ಪ ದೂರದಲ್ಲಿ ಮನೆಯೊಂದು ಇದ್ದು, ಅವರಿಗೂ ಯಾವುದೇ ಅಪಾಯದ ಸಂಭವ ಕಡಿಮೆ ಇದೆ. ಹಾಗಿದ್ದೂ ದಿನದ 24 ಗಂಟೆಯೂ ಬಂಡೆ ಬಗ್ಗೆ ಕಣ್ಗಾವಲು ಇರಿಸುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಮಾಂಡ್ ಕಂಟ್ರೋಲ್ ರೂಂ ಸೂಪರಿಂಟೆಂಡೆಂಟ್ ಚಂದ್ರಶೇಖರಯ್ಯ ತಿಳಿಸಿದ್ದಾರೆ.ದ.ಕ.: ಇಂದು ಕೂಡ 5 ತಾಲೂಕುಗಳಿಗೆ ರಜೆಮಂಗಳೂರು: ಕರಾವಳಿಯಲ್ಲಿ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.19 ರಂದು ಶುಕ್ರವಾರ ದ.ಕ. ಜಿಲ್ಲೆಯ ಐದು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯಕಡಬ ತಾಲೂಕುಗಳ ಅಂಗನವಾಡಿಯಿಂದ ತೊಡಗಿ ಪಿಯುಸಿ ವರೆಗೆ ರಜೆ ನೀಡಲಾಗಿದೆ. ಅವಶ್ಯಕವಾದಲ್ಲಿ ಶಾಲಾ ಕಾಲೇಜು ಶಿಕ್ಷಕರು ಆನ್ಲೈನ್ ಮೂಲಕ ತರಗತಿಯನ್ನು ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಮಂಗಳೂರು, ಉಳ್ಳಾಲ, ಮೂಡಬಿದಿರೆ, ಮೂಲ್ಕಿ. ತಾಲೂಕುಗಳಿಗೆ ರಜೆ ಇರುವುದಿಲ್ಲ.