ಬೆಳಗಾವಿಯಲ್ಲಿ ಅವಾಂತರ ಸೃಷ್ಟಿಸಿದ ವರ್ಷಧಾರೆ

KannadaprabhaNewsNetwork |  
Published : Jul 26, 2024, 01:35 AM IST
ಕವಳೆವಾಡಿ ರಸ್ತೆಯಲ್ಲಿ ಬೃಹತ್‌ ಮರ ಬಿದ್ದಿರುವುದು | Kannada Prabha

ಸಾರಾಂಶ

ಬೆಳಗಾವಿ ನಗರದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಗಿಡಗಳು, ಮನೆಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳಿಗೂ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ಮುಳುಗಡೆಯಾಗಿದೆ.

ಅಮನ್‌ ನಗರ, ವಡಗಾವಿ ಅನ್ನಪೂರ್ಣೇಶ್ವರಿ ನಗರ, ಬಸವನ ಕುಡಚಿ, ಪೀರನವಾಡಿ, ಗಾಂಧಿನಗರ ಮತ್ತಿತರ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಅಮನ್‌ ನಗರದಲ್ಲಿ ಕಾಲು ಜಾರಿಬಿದ್ದು ಮೃತಪಟ್ಟಿದ್ದ ಮೆಹಬೂಬಿ ಮಕಾಂದಾರ ( 90) ಎಂಬ ವೃದ್ಧೆ ಶವ ಸಾಗಣೆಗೂ ಪರದಾಡಬೇಕಾಯಿತು. ಅಮನ್‌ ನಗರಕ್ಕೆ ನೀರು ನುಗ್ಗಿದ್ದು, ರಸ್ತೆ ಮೇಲೆಯೇ ಮೊಣಕಾಲಿನವರೆಗೆ ನೀರು ನಿಂತಿದೆ. ವೃದ್ಧೆಯ ಶವವನ್ನು ಮೊಣಕಾಲುದ್ಧ ನೀರಲ್ಲೇ ಹೊತ್ತು ತರಲಾಯಿತು.

ಪೀರನವಾಡಿಯ ಪಾಟೀಲ ಗಲ್ಲಿಯಲ್ಲಿ ಮನೆಗೆ ನೀರು ನುಗ್ಗಿದ್ದರಿಂದ ಇಬ್ಬರು ಬಾಣಂತಿಯರನ್ನು ಬೇರೆಕಡೆಗೆ ಸ್ಥಳಾಂತರಿಸಲಾಯಿತು. ಎರಡು ದಿನಗಳಿಂದ ಕುಟುಂಬಸ್ಥರು ಮನೆಯಲ್ಲಿರುವ ನೀರನ್ನು ಹೊರಹಾಕಲು ಹರಸಾಹಸ ಮಾಡಬೇಕಾಯಿತು. ನಾಗಲಿಂಗ ಹಿರೇಮಠ ಎಂಬುವರ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿರುವ ಅಡುಗೆ ವಸ್ತುಗಳೆಲ್ಲವೂ ನೀರು ಪಾಲಾಗಿವೆ. ಇಬ್ಬರು ಬಾಣಂತಿಯರು, ನವಜಾತ ಶಿಶುಗಳನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ.

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವಿಠ್ಠಲ ಸತ್ಯಪ್ಪ ಪಾಟೀಲ ಎಂಬುವವರು ಗಾಯಗೊಂಡಿದ್ದಾರೆ. ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ವೇಳೆ ಮನೆ ಕುಸಿದಿದೆ. ಅದೃಷ್ಟವಶಾತ್‌ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಠ್ಠಲ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಡಗಾವಿಯ ಅನ್ನಪೂರ್ಣೇಶ್ವರಿ ನಗರ ದ್ವೀಪದಂತೆ ಗೋಚರಿಸುತ್ತಿದೆ. ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುತ್ತಿದೆ. ಅನ್ನಪೂರ್ಣೇಶ್ವರಿ ನಗರ, ಯಳ್ಳೂರು ರಸ್ತೆಯ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಹಾವುಗಳ ಕಾಟವೂ ಶುರುವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ. ಗಣೇಶಪುರದಿಂದ ಬಿಜಗರ್ಣಿ ರಸ್ತೆ ಮಾರ್ಗದಲ್ಲಿ ಏಳು ಬೃಹತ್‌ ಗಾತ್ರದ ಮರುಗಳ ನೆಲಕ್ಕುರುಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ