ಶುಕ್ರವಾರ ಸಂಜೆ ವಾತಾವರಣದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಭಾರಿ ಪ್ರಮಾಣದಲ್ಲಿ ಗಾಳಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ತಾಲೂಕಿನ ಬೂದಿಕೋಟೆ ಮಾರ್ಗದ ರಸ್ತೆಯುದ್ದಕ್ಕೂ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಕನ್ನಡಪ್ರಭ ವಾರ್ತೆ, ಬಂಗಾರಪೇಟೆ:
ತಾಲೂಕಿನ ವಿವಿಧ ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು, ಬೃಹತ್ ಗಾತ್ರದ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಪರದಾಡುವಂತಾಗಿತ್ತು.ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಸಾರ್ವಜನಿಕರು ತತ್ತರಿಸಿದ್ದರು. ಶುಕ್ರವಾರ ಸಂಜೆ ವಾತಾವರಣದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಭಾರಿ ಪ್ರಮಾಣದಲ್ಲಿ ಗಾಳಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ತಾಲೂಕಿನ ಬೂದಿಕೋಟೆ ಮಾರ್ಗದ ರಸ್ತೆಯುದ್ದಕ್ಕೂ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಶಾಲಾ ಹಾಗೂ ಸಾರಿಗೆ ಬಸ್ಸುಗಳು ಸಂಚರಿಸಲು ಸಾಧ್ಯವಾಗದೆ ಶಾಲಾ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಬಸ್ ಇಳಿದು ಮನೆಗಳಿಗೆ ನಡೆದು ಕೊಂಡು ಹೋಗುವ ದೃಶ್ಯ ಕಂಡು ಬಂದಿತ್ತು. ಪ್ರಯಾಣಿಕರ ಅನುಕೂಲಕ್ಕೆ ಜೆಸಿಬಿ ತಂದು ಮರಗಳ ತೆರವುಗೊಳಿಸಲಾಯಿತು. ಕೊಮ್ಮೇನಹಳ್ಳಿ ಬನಹಳ್ಳಿ ಗ್ರಾಮಗಳ ಬಳಿ ಬಿರುಗಾಳಿಯ ರಭಸಕ್ಕೆ ಏಳೆಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗಿ ಕತ್ತಲಲ್ಲಿ ಕಾಲಕಳೆದರು. ಗಾಳಿ ಮಳೆಯಿಂದ ರೈತರ ವಿವಿಧ ಬೆಳೆಗಳು ಸಹ ನಾಶವಾಗಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ.
ಮಳೆಯ ಜೊತೆಗೆ ಆಲಿಕಲ್ಲು ಬಿದ್ದ ಕಾರಣ ಮಾವಿನ ಕಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ನೆಲದ ಪಾಲಾಗಿವೆ. ಟೊಮೆಟೋ, ಸೇವಂತಿ, ಬದನೆ ಸೇರಿದಂತೆ ಇತರೆ ಬೆಳೆಗಳಲ್ಲಿ ಹೆಚ್ಚಾಗಿ ನೀರು ಶೇಖರಣೆ ಆಗಿದ್ದರಿಂದ ರೈತರು ಕಾಲುವೆ ಮಾಡಿ ಹೊರ ಹಾಕಿ ಬೆಳೆಯನ್ನು ರಕ್ಷಿಸಿದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳಿಗೆ ನೀರು ಹರಿದ ಘಟನೆಗಳು ನಡೆಯಿತು. ಒಟ್ಟಾರೆಯಾಗಿ ಅನಿರೀಕ್ಷಿತವಾಗಿ ಬಂದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.