10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ, ಹಾವೇರೀಲಿ ಸಿಡಿಲಿಗೆ ಯುವಕ ಬಲಿ

KannadaprabhaNewsNetwork | Updated : May 17 2024, 09:13 AM IST

ಸಾರಾಂಶ

ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ.

  ಬೆಂಗಳೂರು ;  ರಾಜ್ಯದಲ್ಲಿ ಕೃತ್ತಿಕಾ ಮಳೆಯ ಅಬ್ಬರ ಮುಂದುವರಿದಿದ್ದು, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ. ಹಾವೇರಿಯ ಕುರುಬಗೊಂಡ ಗ್ರಾಮದಲ್ಲಿ ಸಿಡಿಲಿಗೆ ಯುವಕನೊಬ್ಬ ಬಲಿಯಾಗಿದ್ದರೆ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಶಾಲೆಯ ಮೇಲೆ ಮರ ಬಿದ್ದು, ಅಪಾರ ಹಾನಿ ಸಂಭವಿಸಿದೆ.

ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಹಲವೆಡೆ ಗುರುವಾರವೂ ಮಳೆ ಮುಂದುವರಿದಿದ್ದು, ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಸಿಡಿಲು ಬಡಿದು ದಯಾನಂದ ಹನುಮಂತಗೌಡರ ಪುಟ್ಟನಗೌಡ್ರ (20) ಎಂಬುವರು ಮೃತಪಟ್ಟಿದ್ದಾರೆ. ಹೊಲಕ್ಕೆ ತೆರಳಿದ್ದಾಗ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿಯಿತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅರಣ್ಯ ಇಲಾಖೆಯ ಆವರಣದಲ್ಲಿದ್ದ ಬೃಹದಾಕಾರದ ಮರವೊಂದು ಪಕ್ಕದಲ್ಲಿದ್ದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕಟ್ಟಡದ ಮೇಲೆ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ರಜೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ ನಗರ ಸೇರಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಹಲವೆಡೆ ಮರಗಳು ಉರುಳಿ ಬಿದ್ದಿವೆ. ಇದರಿಂದ ಗ್ರಾಮೀಣ ಭಾಗದ ಕೆಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಕುಶಾಲನಗರ ಸೇರಿ ಕೊಡಗಿನ ಹಲವೆಡೆ ಮಳೆಯಾಗಿದ್ದು, ಕಳೆದ 75 ದಿನಗಳಿಂದ ಹರಿವು ಸ್ಥಗಿತಗೊಳಿಸಿದ್ದ ನಾಡಿನ ಜೀವನದಿ ಕಾವೇರಿ ಇದೀಗ ಮತ್ತೆ ತವರಲ್ಲಿ ಹರಿಯಲು ಆರಂಭಿಸಿದೆ. ಆ ಮೂಲಕ ಕೊಡಗಿನ ನದಿ ದಡದ ಜನರಲ್ಲಿ ಸಂತಸ ಮೂಡಿದೆ. ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಸಂಜೆ 4 ಗಂಟೆಯಿಂದ ಭಾರಿ ಸಿಡಿಲು, ಮಿಂಚು, ಗುಡುಗಿನ ಆರ್ಭಟದೊಂದಿಗೆ ಸುಮಾರು ಮೂರೂವರೆ ತಾಸು ಮಳೆಯಾಯಿತು. ಕಡಬ, ಬೆಳ್ತಂಗಡಿ, ಉಪ್ಪಿನಂಗಡಿ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆಯೂ ರಾತ್ರಿ 8.45ರ ವೇಳೆಗೆ ಮಳೆ ಸುರಿದಿದೆ. ಶೃಂಗೇರಿ, ಮೂಡಿಗೆರೆ ಸೇರಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸಂಜೆ 4ರಿಂದ 2 ತಾಸು ಉತ್ತಮ ಮಳೆ ಸುರಿದಿದ್ದು, ಕಾಫಿ ಹಾಗೂ ಅಡಕೆ ಬೆಳೆಗಾರರು ಸಂತಸಗೊಂಡಿದ್ದಾರೆ.

Share this article