ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದ ನದಿಗಳಿಗೆ ಜೀವ ಕಳೆ ಬಂದಿದ್ದು, ನೀರಿಲ್ಲದೇ ಭಣಗುಡುತ್ತಿದ್ದ ಜಲಾಶಯಗಳಿಗೆ ಒಳ ಹರಿವು ಬರಲಾರಂಭಿಸಿದೆ.
ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರ ಪರಿಸ್ಥಿತಿಯಿಂದ ಕೆರೆ, ಕುಂಟೆ, ಹಳ್ಳ-ಕೊಳ್ಳಗಳು, ನದಿಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದವು. ಜಲಾಶಯಗಳ ಒಡಲು ಸಹ ಬರಿದಾಗುತ್ತಿತ್ತು. ಕೆಆರ್‌ಎಸ್ ಜಲಾಶಯ ಸೇರಿದಂತೆ ರಾಜ್ಯದ ಹಲವು ಜಲಾಶಯಗಳು ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ನೀರಿನ ಸಂಗ್ರಹ ಮಟ್ಟ ತಲುಪಿದ್ದವು.
ಇದೀಗ ಕಳೆದ 15 ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯ ಪರಿಣಾಮ ನದಿಗಳಲ್ಲಿ ನೀರಿನ ಸೆಲೆ ಹರಿಯತೊಡಗಿದ್ದು, ಒಂದಿಷ್ಟು ಪ್ರಮಾಣದ ಒಳ ಹರಿವು ಜಲಾಶಯಗಳಿಗೆ ಬರತೊಡಗಿದೆ.
ಕಾವೇರಿ ಕಣಿವೆಯಲ್ಲಿ ಎಲ್ಲ ಜಲಾಶಯಗಳಿಗೆ ನೀರು: ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ, ಕಾವೇರಿ ಹಾಗೂ ಹೇಮಾವತಿ ಜಲಾಶಯಗಳಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಒಳಹರಿವು ಶುರುವಾಗಿದೆ. ಅದೇ ರೀತಿ ಕೃಷ್ಣಾ ಕಣಿವೆಯ ಭದ್ರಾ ಜಲಾಶಯಕ್ಕೆ ಮಾತ್ರ ಒಳಹರಿವು ಬರುತ್ತಿದ್ದು, ಉಳಿದ ಯಾವುದೇ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ವಿದ್ಯುತ್ ಉದ್ದೇಶಕ್ಕೆ ಸ್ಥಾಪಿಸಲಾದ ಲಿಂಗನಮಕ್ಕಿ, ಸೂಪ ಜಲಾಶಯಕ್ಕೆ ಒಳಹರಿವು ಬರುತ್ತಿದೆ.
ಹೆಚ್ಚುತ್ತಿರುವ ನೀರು: ರಾಜ್ಯದಲ್ಲಿ ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಒಂದು ವಾರ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪ್ರಮಾಣ ನೀರು ಜಲಾಶಯಗಳಿಗೆ ಬರುವ ಲಕ್ಷಣ ಕಂಡುಬರುತ್ತಿದೆ.
ವಾಡಿಕೆಗಿಂತ ಹೆಚ್ಚು ಮಳೆ ಕಾರಣ: ಮೇ ಆರಂಭದಿಂದ ಈವರೆಗೆ ದಕ್ಷಿಣ ಒಳನಾಡಿನಲ್ಲಿ ಶೇ.55ರಷ್ಟು, ಉತ್ತರ ಒಳನಾಡಿನಲ್ಲಿ ಶೇ.74ರಷ್ಟು, ಮಲೆನಾಡು ಭಾಗದಲ್ಲಿ ಶೇ.67ರಷ್ಟು ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾದರೆ, ಕರಾವಳಿಯಲ್ಲಿ ಮಾತ್ರ ವಾಡಿಕೆ ಪ್ರಮಾಣಕ್ಕಿಂತ ಶೇ.11ರಷ್ಟು ಕಡಿಮೆ ಮಳೆಯಾಗಿದೆ. ಒಟ್ಟಾರೆ ಕಳೆದ ಎರಡು ವಾರದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.57ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಹೀಗಾಗಿ, ಮೇ ತಿಂಗಳಿನಲ್ಲಿಯೇ ಜಲಾಶಯಗಳಿಗೆ ನೀರು ಹರಿದು ಬರುವುದಕ್ಕೆ ಶುರುವಾಗಿದೆ.
ಜಲಾಶಯಗಳ ಒಳ ಹರಿವು (ಕ್ಯೂಸೆಕ್ಸ್‌ಗಳಲ್ಲಿ) (ಮೇ 18ಕ್ಕೆ)
ಜಲಾಶಯಗಳು ಒಳ ಹರಿವು
ಲಿಂಗನಮಕ್ಕಿ 544
ಸೂಪಾ 547
ಹಾರಂಗಿ 308
ಹೇಮಾವತಿ 393
ಕೆಆರ್‌ಎಸ್ 1153
ಕಬಿನಿ 43
ಭದ್ರಾ 571