ಮಲೆನಾಡಲ್ಲಿ ಮಳೆ: ಮೈದುಂಬಿದ ತುಂಗಭದ್ರೆ, ರೈತರು ಖುಷ್‌

KannadaprabhaNewsNetwork |  
Published : Aug 06, 2026, 01:30 AM IST
 04 ಜೆ.ಜಿ.ಲ್.1)   ಜಗಳೂರು ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ರೈತ ಮುಖಂಡರು ಹಾಗೂ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಮಾತನಾಡಿದರು. | Kannada Prabha

ಸಾರಾಂಶ

ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶ, ಮಲೆನಾಡು, ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನಲ್ಲಿ 9.5 ಮೀಟರ್‌ನಷ್ಟು ಅಪಾಯದ ಮಟ್ಟದಲ್ಲಿ ನೀರು ಹರಿದುಬರುತ್ತಿದೆ.

- 9.5 ಮೀಟರ್‌ನಷ್ಟು ಅಪಾಯದ ಮಟ್ಟದಲ್ಲಿ ನದಿ । ತುಂಗಾ ಡ್ಯಾಂನಿಂದ 37 ಸಾವಿರ ಕ್ಯು. ನೀರು ನದಿಗೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶ, ಮಲೆನಾಡು, ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನಲ್ಲಿ 9.5 ಮೀಟರ್‌ನಷ್ಟು ಅಪಾಯದ ಮಟ್ಟದಲ್ಲಿ ನೀರು ಹರಿದುಬರುತ್ತಿದೆ.

ಶಿವಮೊಗ್ಗ ಜಿಲ್ಲೆ ತುಂಗಾ ಜಲಾಶಯದಿಂದ 37 ಸಾವಿರ ಕ್ಯುಸೆಕ್‌ಗೂ ಅಧಿಕ ಹೊರಹರಿವು ಇದೆ. ಭದ್ರಾ ಡ್ಯಾಂಗೂ ಸಾಕಷ್ಟು ಒಳಹರಿವು ಬರುತ್ತಿದೆ. ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಸಹಜವಾಗಿಯೇ ಜೀವನದಿ ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದು, ಈ ಸೊಬಗು ಕಣ್ಮನ ತುಂಬಿಕೊಳ್ಳಲು ನದಿಪಾತ್ರಗಳ ಊರು, ನಗರ, ಪಟ್ಟಣ ಪ್ರದೇಶಗಳಿಗೆ ಜನರು ಅಪಾರ ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, ಶೇ.33ರಷ್ಟು ಮಾತ್ರವೇ ಜಿಲ್ಲೆಯಲ್ಲಿ ಬಿತ್ತನೆಯಾಗಿದೆ. ಮಂಗಳವಾರ ಮಧ್ಯಾಹ್ನ ಸುಮಾರು ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ. ಇದೀಗ ನದಿಯಲ್ಲೂ ಅಪಾಯದ ಮಟ್ಟಕ್ಕೆ ನೀರು ಹರಿಯುತ್ತಿದ್ದು, ರೈತಾಪಿ ಜನರಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕಿನ ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ರೈತರು ಈಗ ನಿರಾಳರಾಗಿದ್ದು, ಎಲ್ಲರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ನಾಲೆಗಳಿಗೆ ನೀರು ಹರಿಸಲು ಮನವಿ:

ಭದ್ರಾ ಡ್ಯಾಂನಲ್ಲಿ ನೀರು ಸಂಗ್ರಹ ಆದಷ್ಟು ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರ ಬದುಕು ಹಸನಾಗುತ್ತದೆ. ಹಾಗಾಗಿ, ಆಕಾಶದತ್ತ ಮುಖ ಮಾಡಿ, ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಗಾಗಿ ರೈತರು ಪ್ರಾರ್ಥಿಸುವುದು ಹೊಸದಲ್ಲ. ಭದ್ರಾ ಡ್ಯಾಂಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ. ಭದ್ರಾ ಕಾಡಾ ಸಮಿತಿ ಸಭೆ ಕರೆದು, ನಾಲೆಗಳಿಗೆ ನೀರು ಬಿಡುವಂತೆ ಭಾರತೀಯ ರೈತ ಒಕ್ಕೂಟದ ಧುರೀಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಕೊಂಡಜ್ಜಿ ಶಾನುಬೋಗರ ನಾಗರಾಜ, ಆ‍ವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಬೆಳವನೂರು ಬಿ.ನಾಗೇಶ್ವರ ರಾವ್ ಇತರೆ ರೈತರು ಸಭೆ ಸೇರಿ ಒತ್ತಾಯಿಸಿದ್ದರು.

ಮಂಗಳವಾರ ಜಿಲ್ಲಾಧಿಕಾರಿ ಅವರನ್ನು ರೈತ ಒಕ್ಕೂಟದ ಮುಖಂಡರು, ರೈತ ಮುಖಂಡರಾದ ತೇಜಸ್ವಿ ವಿ.ಪಟೇಲ್, ಶಾಮನೂರು ಲಿಂಗರಾಜ, ಹುಚ್ಚವ್ವನಹಳ್ಳಿ ಮಂಜುನಾಥ, ಆವರಗೊಳ್ಳ ಷಣ್ಮುಖಯ್ಯ, ನಾಗೇಶ್ವರ ರಾವ್, ಹೊನ್ನೂರು ಮುನಿಯಪ್ಪ ಸೇರಿದಂತೆ ಅನೇಕರು ಭೇಟಿ ಮಾಡಿ, ಸಭೆ ಮೂಲಕ ಒತ್ತಾಯಿಸಿದ್ದಾರೆ.

ದಾವಣಗೆರೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ, ಭದ್ರಾ ಕಾಡಾ ಸಮಿತಿ ಸಭೆ ಕರೆಯುವಂತೆಯೂ ರೈತ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಬುಧವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್‌ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾ ಸಚಿವರನ್ನು ಭೇಟಿ ಮಾಡಿ, ಬರ ಪರಿಸ್ಥಿತಿ ಹಿನ್ನೆಲೆ ನೀರು, ಕುಡಿಯುವ ನೀರು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ.

- - -

(ಬಾಕ್ಸ್‌)

* ಮಳೆ ಪರಿಹಾರ ವಿತರಿಸಲು ತಾಲೂಕು ಆಡಳಿತ ಸಜ್ಜು ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಂಗಳವಾರ ವಾಡಿಕೆಯ 3.6 ಮಿಲಿ ಮೀಟರ್‌ ಮಳೆಗೆ 9.0 ಮಿ.ಮೀ. ವಾಸ್ತವ ಮಳೆಯಾಗಿದ್ದು, ದಾವಣಗೆರೆ ನಗರ, ತಾಲೂಕಿನಲ್ಲಿ 3.1 ಮಿ.ಮೀ. ವಾಡಿಕೆ ಮಳೆಗೆ 15.0 ಮಿ.ಮೀ. ವಾಸ್ತವ ಮಳೆಯಾಗಿದೆ.

ಚನ್ನಗಿರಿಯಲ್ಲಿ 5.7 ಮಿ.ಮೀ. ವಾಡಿಕೆ ಮಳೆಗೆ 9.5 ಮಿ.ಮೀ. ವಾಸ್ತವ ಮಳೆ, ಹರಿಹರದಲ್ಲಿ 1.8 ಮಿ.ಮೀ. ವಾಡಿಕೆ ಮಳೆಗೆ 8.1 ಮಿ.ಮೀ. ವಾಸ್ತವ ಮಳೆಯಾಗಿದೆ. ಹೊನ್ನಾಳಿಯಲ್ಲಿ 2.4 ಮಿ.ಮೀ. ವಾಡಿಕೆ ಮಳೆಗೆ 5.9 ಮಿ.ಮೀ. ವಾಸ್ತವ ಮಳೆ, ಜಗಳೂರು 2.2 ಮಿ.ಮೀ. ವಾಡಿಕೆ ಮಳೆಗೆ 5.5 ಮಿ.ಮೀ. ವಾಸ್ತವ ಮಳೆ, ನ್ಯಾಮತಿಯಲ್ಲಿ 5.6 ಮಿಮೀ ವಾಡಿಕೆ ಮಳೆಗೆ 6.3 ಮಿಮೀ ವಾಸ್ತವ ಮಳೆ ಸುರಿದಿದೆ.

ಭಾರೀ ಮಳೆಯಿಂದಾಗಿ ಚನ್ನಗಿರಿ ತಾಲೂಕಿನಲ್ಲಿ 2 ಮನೆಗಳು ಪೂರ್ಣ, 1 ಮನೆ ಭಾಗಶಃ ಹಾನಿಗೀಡಾಗಿದ್ದು, ₹3 ಲಕ್ಷದಷ್ಟು ನಷ್ಟವಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಯಾವುದೇ ದನದ ಕೊಟ್ಟಿದೆ, ಜೀವ ಹಾನಿ, ಬೆಳೆ ಹಾನಿ, ಜಾನುವಾರು ಜೀವಹಾನಿ ಬಗ್ಗೆ ವರದಿಯಾಗಿಲಿಲ್ಲ. ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಸೂಕ್ತ ಪರಿಹಾರ ವಿತರಿಸಲು ತಾಲೂಕು ಆಡಳಿತ ಕಾರ್ಯೋನ್ಮುಖವಾಗಿದೆ.

- - -

-ಚಿತ್ರ-೭: ಮಲೇಬೆನ್ನೂರು ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಬುಧವಾರ ಇಳಿಕೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಂಕರ್‌......ಕಾರ್ಯನಿರ್ವಹಿಸದ ಪರಿವರ್ತಕಗಳ ಬದಲಿಸಿ
ಮಿಡ್ಲ್‌ ಕೆಳಗೆ.ಆಧುನಿಕತೆಯಿಂದ ವಿಕೋಪಗಳ ಹೆಚ್ಚಳ: ಶಿಕ್ಷಣಾಧಿಕಾರಿ