ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೃಷ್ಣಾ ಇದೀಗ ತನ್ನ ಎರಡು ಒಡಲುಗಳ ಮುಖಾಂತರ ಮೈದುಂಬಿ ರಭಸದಿಂದ ಹರಿಯುತ್ತಿದ್ದಾಳೆ.
ಇದರಿಂದ ನದಿಯಾಶ್ರಿತ ಅನೇಕ ನೀರಾವರಿ ಯೋಜನೆಗಳ ಕಾಲುವೆಗಳಿಗೂ ನೀರು ತುಂಬಿ ಹರಿಯಲಾರಂಭಿಸಿದೆ. ರಬಕವಿ-ಮಹೇಷವಾಡಗಿ ಸೇತುವೆ ಸಂಪೂರ್ಣ ಮುಳುಗಿಹೋಗಿದ್ದು, ರಕ್ಕಸ ಗಾತ್ರದ ಅಲೆಗಳ ರಭಸ ಹೆಚ್ಚಾಗಿ ನದಿ ನೀರಿನ ಸೆಳೆತವಿರುವ ತೀವ್ರವಾದ ಕಾರಣ ಇಲ್ಲಿನ ಬೋಟ್ ಸೇವೆಯಲ್ಲಿ ರದ್ದು ಮಾಡಲಾಗಿದೆ. ಸೇತುವೆ ಕೆಳಪ್ರದೇಶದ ಅಸ್ಕಿ-ಮಹೇಷವಾಡಗಿ ನದಿಮಾರ್ಗದಲ್ಲಿ ನದಿ ವಿಶಾಲವಾಗಿ ಹರವಿಕೊಂಡು ಹರಿಯುವುದರಿಂದ ಅಲ್ಲಿ ಅಲೆಗಳು ಸೋತು ಹೋಗಿರುವ ಸ್ಥಳವಾಗಿದ್ದರಿಂದ ಅಲ್ಲಿಂದ ಬೋಟ ಸೇವೆ ಆರಂಭಿಸಲಾಗಿದೆ ಎಂದು ತಾಲೂಕು ಆಡಳಿತ ಪತ್ರಿಕೆಗೆ ತಿಳಿಸಿದೆ.ಮುಂದಿನ ದಿನಗಳಲ್ಲಿ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಆದರೆ ಪ್ರವಾಹದ ಯಾವುದೇ ಭೀತಿ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ನದಿ ಪಾತ್ರದ ಇಕ್ಕೆಲಗಳಲ್ಲ್ಲಿ ವಾಸಿಸುವ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಉತ್ತಮ ಎಂದು ತಾಲೂಕು ಆಡಳಿತ ತಿಳಿಸಿದೆ.
ಹಿಪ್ಪರಗಿ ಜಲಾಶಯದಿಂದ ಬಂದಷ್ಟೇ ಪ್ರಮಾಣದ ನೀರನ್ನು ಎಲ್ಲ ೧೨ ಗೇಟ್‌ಗಳ ಮೂಲಕ ಹರಿ ಬಿಡಲಾಗುತ್ತಿದೆ. ಬೋಟ್ ಸೇವೆ ಪ್ರಾರಂಭಿಸಿರುವ ಗುತ್ತಿಗೆದಾರರು ಮತ್ತು ಇಲಾಖೆಯ ಸಿಬ್ಬಂದಿ ಪ್ರಯಾಣಿಕರ ರಕ್ಷಣೆಗೆ ಆದ್ಯತೆ ನೀಡಿ, ಬೋಟ್‌ನಲ್ಲಿ ಸಾಗಿಸಲು ಸಾಧ್ಯವಿದ್ದಷ್ಟೇ ಜನರನ್ನು ಮತ್ತು ದ್ವಿಚಕ್ರವಾಹನಗಳನ್ನು ಸಾಗಿಸುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸಾಮರ್ಥ್ಯಾನುಸಾರ ಪ್ರಯಾಣಿಕರನ್ನು ಮತ್ತು ವಾಹನಗಳನ್ನು ಹೊತ್ತೊಯ್ಯಲು ಆದೇಶಿಸುವುದು ಯಾವುದೇ ಸಂಭಾವ್ಯ ಅನಾಹುತವಾಗುವ ಮುನ್ನ ತಡೆಗಟ್ಟುವುದು ಬಹುಮುಖ್ಯವಾಗಿದೆ.