ಶಾಸಕರ ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ..!

KannadaprabhaNewsNetwork |  
Published : Jan 30, 2024, 02:07 AM IST
54 | Kannada Prabha

ಸಾರಾಂಶ

ಸಾಗುವಳಿ ಪತ್ರ ನೀಡಲು ಅಕ್ರಮ ಸಕ್ರಮ ಸಮಿತಿಯ ಅಗತ್ಯವಿದ್ದು, ಇನ್ನೂ 3-4 ತಿಂಗಳುಗಳ ನಂತರ ಸಮಿತಿ ರಚನೆಯಾಗಲಿದೆ. ಸಾಗುವಳಿ ಪತ್ರಕ್ಕಾಗಿ ಫಾರಂ. ನಂ. 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವವರ ಕುರಿತು ಸಮಿತಿ ನಿರ್ಧರಿಸಲಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿರುವುದು ಸಹಜ. ಆದರೆ ಸಮಸ್ಯೆ ಅರಿತು ಶೀಘ್ರ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಹುಣಸೂರುತಾಲೂಕು ಆಡಳಿತದಿಂದ ಶಾಸಕ ಜಿ.ಡಿ. ಹರೀಶ್ ಗೌಡ ಅಧ್ಯಕ್ಷತೆಯಲ್ಲಿ ರತ್ನಪುರಿ ಗ್ರಾಮದ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಧರ್ಮಾಪುರ ಜಿಪಂ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಗ್ರಾಮೀಣರು ಸಮಸ್ಯೆಗಳ ಮಳೆಯನ್ನೇ ಸುರಿಸಿದರು.

ಜಿಪಂ ವ್ಯಾಪ್ತಿಯ ಆಸ್ಪತ್ರೆ ಕಾವಲ್ ಸೊಸೈಟಿ ಜಮೀನಿಗೆ ಖಾತೆ ನೀಡುವ ಆರ್ಟಿಸಿ ಗೊಂದಲ, ಖಾತೆಯ ಸಂಖ್ಯೆಯಲ್ಲಿನ ಗೊಂದಲ ಸೇರಿದಂತೆ ಬಹುತೇಕ ರೈತರು ಜಮೀನಿನ ಖಾತೆ ಮಾಡಲು ಅಧಿಕಾರಿಗಳು 4-5 ವರ್ಷದಿಂದ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಸಾಗುವಳಿ ಪತ್ರಕ್ಕಾಗಿ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಗೃಹಲಕ್ಷ್ಮೀ ಯೋಜನೆಯ ನೋಂದಣಿಯೂ ಆಗುತ್ತಿಲ್ಲ, ನೋಂದಣಿಯಾದವರಿಗೆ ಹಣವೂ ಬರುತ್ತಿಲ್ಲ ಎಂದು ಹಲವು ಮಹಿಳೆಯರು ಆಕ್ಷೇಪವೆತ್ತಿ ದೂರು ಸಲ್ಲಿಸಿದರು.

ಬಿಳಿಕೆರೆ ಮತ್ತು ಹೊನ್ನಿಕುಪ್ಪೆ ಗ್ರಾಮದ ಹಲವು ರೈತರು ಎರಡು ವರ್ಷಗಳ ಹಿಂದೆ ಅತಿವೃಷ್ಟಿಗೆ ತಮ್ಮ ಮನೆ ನೆಲಸಮವಾಗಿತ್ತು. ಕಂದಾಯ ಇಲಾಖೆ ಅದಿಕಾರಿಗಳು ಸ್ಥಳಪರಿಶೀಲಿಸಿ ಪರಿಹಾರ ನೀಡುವುದಾಗಿ ತಿಳಿಸಿದ್ದರು.

ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಅವಲತ್ತುಕೊಂಡರು. ಉದ್ದೂರು ಕಾವಲ್, ಉಯಿಗೊಂಡನಹಳ್ಳಿ ಗ್ರಾಮದ ಕೆಲ ರೈತರು ತಮ್ಮ ಜಮೀನಿಗೆ ರಸ್ತೆ ಬಿಡಿಸಿಕೊಡಿರೆಂದು ಅರ್ಜಿ ಸಲ್ಲಿಸಿದರೆ, ಕೆಲವರು ಒತ್ತುವರಿಯಾಗಿರುವ ರಸ್ತೆ ತೆರವುಗೊಳಿಸಲು ಕೋರಿದರು.

ರತ್ನಪುರಿಯ ಕೆಲ ಯುವಕರು ತಮ್ಮ ಗ್ರಾಮಕ್ಕೆ ಸಾರ್ವಜನಿಕ ಶೌಚಗೃಹ ಅವಶ್ಯಕತೆಯಿದ್ದು, ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಆಗಿಲ್ಲ ಎಂದು ದೂರಿದಾಗ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನದ ಕೊರತೆಯಿದೆ ಎಂದು ಪಿಡಿಒ ತಿಳಿಸಿದರು.

ಏಪ್ರಿಲ್ ನಂತರ ಶಾಸಕರ ಅನುದಾನದಡಿ ನಿರ್ಮಿಸಿಕೊಡುವುದಾಗಿ ಶಾಸಕ ಜಿ.ಡಿ. ಹರೀಶ್ ಗೌಡ ಭರವಸೆ ನೀಡಿದರು. ಗ್ರಾಮಸ್ಥ ಅಪ್ಪಣ್ಣ ರತ್ನಪುರಿ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿಕೊಡಲು ಕೋರಿದರು. ಧರ್ಮಾಪುರ ಗ್ರಾಪಂ ವ್ಯಾಪ್ತಿಯ ಶಿವಾಜಿನಗರದ ನಿವಾಸಿಗಳು ಸ್ಮಶಾನದ ಬೇಡಿಕೆಯಿಟ್ಟರು.

ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ಸಾಗುವಳಿ ಪತ್ರ ನೀಡಲು ಅಕ್ರಮ ಸಕ್ರಮ ಸಮಿತಿಯ ಅಗತ್ಯವಿದ್ದು, ಇನ್ನೂ 3-4 ತಿಂಗಳುಗಳ ನಂತರ ಸಮಿತಿ ರಚನೆಯಾಗಲಿದೆ. ಸಾಗುವಳಿ ಪತ್ರಕ್ಕಾಗಿ ಫಾರಂ. ನಂ. 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವವರ ಕುರಿತು ಸಮಿತಿ ನಿರ್ಧರಿಸಲಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿರುವುದು ಸಹಜ. ಆದರೆ ಸಮಸ್ಯೆ ಅರಿತು ಶೀಘ್ರ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ಥಳೀಯ ಸಮಸ್ಯೆ ಅರಿಯಲು ಇಂತಹ ಜನಸಂಪರ್ಕ ಸಭೆ ಸಹಕಾರಿಯಾಗಿದೆ. ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕರೆತಂದಿದ್ದೇನೆ. ಅಧಿಕಾರಿಗಳು ಜನರನ್ನು ಅಲೆದಾಡಿಸದೇ ತಮ್ಮ ಕರ್ತವ್ಯಪರತೆಯನ್ನು ಮೆರೆಯಬೇಕು. ಆಸ್ಪತ್ರೆ ಕಾವಲ್ ಸೊಸೈಟಿ ಭೂಮಿಯ ಗೊಂದಲದ ಕುರಿತು ಸಮಗ್ರವಾಗಿ ಪರಿಶೀಲಿಸಿ ಕ್ರಮವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಉಯಿಗೊಂಡನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಗ್ರಾಮಸ್ಥರಿಂದ ಜಮೀನು ಖಾತೆ, ಪೌತಿಖಾತೆ ಮುಂತಾದ ಸೇವೆಗಳಿಗೆ ಲಂಚ ಪಡೆದು ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದಾರೆಂದು ಲಕ್ಕೇಗೌಡ ಸೇರಿದಂತೆ ಹಲವರು ದೂರು ನೀಡಿ ದಾಖಲೆಯನ್ನು ಶಾಸಕರ ಬಳಿ ಸಲ್ಲಿಸಿದರು. ದಾಖಲೆಗಳನ್ನು ದಿನಾಂಕಗಳನ್ನು ಕಂಡು ಕೋಪಗೊಂಡ ಶಾಸಕ ಹರೀಶ್ ಗೌಡ ಸ್ಥಳದಲ್ಲಿದ್ದ ವಿಎ ಶಿವಕುಮಾರ್ಗೆ ನಿಮಗೆ ಕೆಲಸ ಮಾಡಲು ಏನು ರೋಗ? ರೈತರಿಂದ ಹಣ ಪಡೆದರೆ ಒಳ್ಳೆಯದಾಗುತ್ತಾ ನಿಮಗೆ? ನಿಮ್ಮ ಸಮಸ್ಯೆಯಾದರೂ ಏನು? ಎಂದು ಏರುದನಿಯಲ್ಲಿ ಪ್ರಶ್ನಿಸಿದರು.

ಎಲ್ಲಾ ಕಡೆಯೂ ನಿಮ್ಮ ಬಗ್ಗೆ ದೂರುಗಳಿವೆ ಎಂದು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್ ಗೆ ಇವರನ್ನು ವರ್ಗಾವಣೆ ಮಾಡಬೇಡಿ, ಅಮಾನತ್ತಿನಲ್ಲಿಡಲು ಹಿರಿಯ ಅದಿಕಾರಿಗಳಿಗೆ ಪತ್ರ ಬರೆಯಿರಿ. ನಾನು ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಆಸ್ಪತ್ರೆ ಕಾವಲ್ ಗ್ರಾಪಂ ಅಧ್ಯಕ್ಷ ರಮೇಶ್, ಸಿಂಗರಮಾರನಹಳ್ಳಿ ಗ್ರಾಪಂ ಅಧ್ಯಕ್ಷ ದೇವರಾಜ್, ಉದ್ದೂರು ಕಾವಲ್ ಗ್ರಾಪಂ.ಅಧ್ಯಕ್ಷೆ ಮುಬಾರಕ್ ಬಾನು, ಧರ್ಮಾಪುರ ಗ್ರಾಪಂ ಅಧ್ಯಕ್ಷ ಮಲ್ಲೇಶ್, ಜಿಪಂ ಮಾಜಿ ಸದಸ್ಯ ಸುರೇಂದ್ರ, ಮುಖಂಡರಾದ ಹರವೆ ಶ್ರೀಧರ್, ಸತೀಶ್ ಪಾಪಣ್ಣ, ಬಸವಲಿಂಗಯ್ಯ, ಶಿವಗಾಮಿ, ರತ್ನಪುರಿ ಪ್ರಭಾಕರ್, ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ. ಮನು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ