ಕಾರವಾರ: ಗೌರಿ- ಗಣೇಶನೊಂದಿಗೆ ಮಳೆಯೂ ಆಗಮಿಸಿದ್ದು, ಗಣೇಶೋತ್ಸವದ ಸಡಗರಕ್ಕೆ ಮಳೆ ಬ್ರೇಕ್ ಹಾಕಿದೆ.ಗಣೇಶ ಚತುರ್ಥಿಗಾಗಿ ಅಂತಿಮ ಹಂತದ ಮಂಟಪ ತಯಾರಿ ಮಾಡುತ್ತಿರುವಾಗಲೇ ಮಳೆ ಧೋ ಎಂದು ಸುರಿಯುತ್ತಿದೆ. ಮಂಗಳವಾರ ಬೆಳಿಗ್ಗೆಯಿಂದ ಮಳೆ ಆರಂಭವಾಗಿದೆ. ಸುರಿಯುವ ಮಳೆಯ ನಡುವೆಯೇ ಮಂಟಪ ಅಲಂಕಾರ ನಡೆಯುತ್ತಿದೆ.ಗಣೇಶಮೂರ್ತಿಗೆ ಮಳೆ ನೀರು ತಾಗಬಾರದೆಂದು ಪ್ಲಾಸ್ಟಿಕ್ ಮುಚ್ಚಿ ತರಲಾಗುತ್ತಿದೆ.
ಹಲವೆಡೆ ಯಕ್ಷಗಾನ, ಸಂಗೀತ, ಭಜನೆ, ತಾಳಮದ್ದಳೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆ ಸಂಭ್ರಮಿಸುತ್ತಾರೆ.
ದೂರದ ಊರುಗಳಲ್ಲಿ ಉದ್ಯೋಗದಲ್ಲಿರುವವರು, ಆಪ್ತೇಷ್ಟರು, ಬಂಧುಗಳು ಮನೆಯಲ್ಲಿ ಸೇರಿ ಗಣಪತಿಯ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.ಚಕ್ಕುಲಿ, ವಡೆ, ಲಡ್ಡು, ಅತಿರಸ, ಕರ್ಜಿಕಾಯಿ, ಮೋದಕ, ಪಂಚಕಜ್ಜಾಯ ಮತ್ತಿತರ ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ ಗಣಪತಿಗೆ ನೈವೇದ್ಯ ಮಾಡಿ ಎಲ್ಲರೊಂದಿಗೆ ಸೇರಿ ತಿನ್ನುವುದೆ ಇನ್ನೊಂದು ಸಂಭ್ರಮ.
ಚೌತಿ ಹಿನ್ನೆಲೆಯಲ್ಲಿ ಮಂಗಳವಾರ ವ್ಯಾಪಾರ ವಹಿವಾಟೂ ಜೋರಾಗಿತ್ತು. ಮಳೆಯ ನಡುವೆಯೇ ಜನತೆ ಮಾರುಕಟ್ಟೆಗೆ ಆಗಮಿಸಿ ವಿವಿಧ ವಸ್ತುಗಳನ್ನು ಖರೀದಿಸಿದರು.
ಹವಾಮಾನ ಇಲಾಖೆಯ ಪ್ರಕಾರ ಮಳೆ ಮತ್ತೇ 3-4 ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಮಳೆಯ ನಡುವೆಯೇ ಚೌತಿ ಆಚರಣೆಗೆ ಜನತೆ ಸಜ್ಜಾಗಿದ್ದಾರೆ.