ಹಂಪಿ ರಥಬೀದಿ ಸಾಲು ಮಂಟಪದಲ್ಲೇ ಮಳೆ ನೀರು

KannadaprabhaNewsNetwork |  
Published : Jun 10, 2024, 12:45 AM IST
9ಎಚ್‌ಪಿಟಿ1- ಹಂಪಿಯ ಸಾಲುಮಂಟಪ ಹಾಗೂ ಮಂಟಪಗಳ ಪಕ್ಕದಲ್ಲೇ ಮಳೆ ನೀರು ನಿಲ್ಲುತ್ತಿದೆ. ಈ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. | Kannada Prabha

ಸಾರಾಂಶ

ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ್ದರಿಂದ ಸಾಲು ಮಂಟಪಗಳಲ್ಲೇ ನೀರು ನಿಲ್ಲುವಂತಾಗಿದೆ.

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಮಳೆಗಾಲದಲ್ಲಿ ಸಾಲುಮಂಟಪದ ಬಳಿಯೇ ನೀರು ನಿಲ್ಲುತ್ತಿದೆ. ಇನ್ನು ವಿಜಯ ವಿಠ್ಠಲ ದೇವಾಲಯದ ರಸ್ತೆಯೂ ದುರಸ್ತಿಗೊಳಿಸಬೇಕಿದೆ. ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ತಗ್ಗುಗುಂಡಿಗಳನ್ನು ಮುಚ್ಚಬೇಕು ಎಂಬುದು ಸ್ಥಳೀಯರು ಹಾಗೂ ಪ್ರವಾಸಿಗರ ಒತ್ತಾಯವಾಗಿದೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿಯ ಸಾಲುಮಂಟಪದ ಬಳಿಯೇ ಮಳೆ ನೀರು ನಿಂತಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಡೆಂಘೀ, ಮಲೇರಿಯಾ ರೋಗಗಳ ಹರಡುವಿಕೆಗೂ ಕಾರಣವಾಗಬಹುದು ಎಂಬುದು ಸ್ಥಳೀಯರ ಅಂಬೋಣವಾಗಿದೆ.

ಹಂಪಿಗೆ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ್ದರಿಂದ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಸಮೀಪವೇ ನೀರು ನಿಲ್ಲುತ್ತಿದೆ. ಇದರಿಂದ ಸ್ವಚ್ಛ ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳುತ್ತಿದೆ. ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ, ಗ್ರಾಮ ಪಂಚಾಯಿತಿ, ರಾಜ್ಯ ಪುರಾತತ್ವ ಇಲಾಖೆ, ಹಂಪಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ್ದರಿಂದ ಸಾಲು ಮಂಟಪಗಳಲ್ಲೇ ನೀರು ನಿಲ್ಲುವಂತಾಗಿದೆ. ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿರುವ ಸ್ಮಾರಕಗಳ ಬಳಿಯೇ ಈ ಗತಿಯಾದರೆ ಹೇಗೆ? ಎಂಬುದು ಪ್ರವಾಸಿಗರ ಪ್ರಶ್ನೆಯೂ ಆಗಿದೆ. ಹಂಪಿಯಲ್ಲಿ ಸ್ವಚ್ಛತೆ ಜತೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠ್ಠಲ ದೇವಾಲಯ, ರಾಣಿ ಸ್ನಾನ ಗೃಹದಿಂದ ನೆಲಸ್ತರದ ಶಿವಾಲಯದ ವರೆಗೆ ಕಚ್ಚಾ ರಸ್ತೆ ಮಳೆ ಹೊಡೆತಕ್ಕೆ ಕೆಸರುಮಯವಾಗುತ್ತಿದೆ. ಈ ರಸ್ತೆ ದುರಸ್ತಿ ಮಾಡಿಸಬೇಕಾದ ಸಂಬಂಧಿಸಿದ ಇಲಾಖೆಗಳು ಅನುದಾನ ಇಲ್ಲ ಎಂಬ ನೆಪವೊಡ್ಡಿ ಸುಮ್ಮನಾಗುತ್ತಿವೆ. ಇದರಿಂದ ಬ್ಯಾಟರಿ ಚಾಲಿತ ವಾಹನಗಳು ಕೆಸರಿನಲ್ಲಿ ತೆರಳುವ ಸ್ಥಿತಿ ಇದೆ. ಇನ್ನು ಪ್ರವಾಸಿಗರು ಕೂಡ ಕೆಸರಿನಲ್ಲೇ ನಡೆದುಕೊಂಡು ಹಂಪಿ ಸ್ಮಾರಕಗಳನ್ನು ನೋಡುವ ಸ್ಥಿತಿ ನಿರ್ಮಾಣವಾಗಿದೆ.

ಹಂಪಿಯ ಗೆಜ್ಜಲ ಮಂಟಪದಿಂದ ಕುದುರೆಗೊಂಬೆ ಮಂಟಪ, ವಿಠ್ಠಲ ಬಜಾರ, ಪುಷ್ಕರಣಿ, ರಾಜರ ತುಲಾಭಾರ, ವಿಜಯ ವಿಠ್ಠಲ ದೇವಾಲಯ, ಕಲ್ಲಿನ ತೇರು, ಪುರಂದರದಾಸರ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳ ವೀಕ್ಷಣೆಗೆ ಕೆಸರುಮಯ ರಸ್ತೆ ಬಳಸುವ ಸ್ಥಿತಿ ಇದೆ. ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕಿದ್ದ ಸಂಬಂಧಿಸಿದ ಇಲಾಖೆಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದರಿಂದ ಕೆಸರಿನಲ್ಲೇ ಸ್ಮಾರಕಗಳ ವೀಕ್ಷಣೆಗೆ ತೆರಳುವ ಸ್ಥಿತಿ ಬಂದೊದಗಿದೆ.

ಮಳೆಗಾಲದಲ್ಲಿ ಹಂಪಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು. ಹಂಪಿಯಲ್ಲಿ ಸ್ವಚ್ಛತೆ ಮಾಯವಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಚ್ಚಾ ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಮಳೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ