ಮಳೆ ಕೊರತೆ, ಗದಗ ಜಿಲ್ಲೆಯಲ್ಲಿ ಶೇ. 80 ಒಣಗಿದ ಬೆಳೆ!

KannadaprabhaNewsNetwork |  
Published : Aug 19, 2026, 02:15 AM IST
ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಬೆಳೆ ಸಂಪೂರ್ಣ ಒಣಗಿರುವುದು. | Kannada Prabha

ಸಾರಾಂಶ

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯಂತೆ ಜಿಲ್ಲಾದ್ಯಂತ ಒಟ್ಟು 218 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು.

ಶಿವಕುಮಾರ ಕುಷ್ಟಗಿ

ಗದಗ: ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಜಿಲ್ಲೆಯ ಕೃಷಿ ಬದುಕು ಸಂಪೂರ್ಣ ಬುಡಮೇಲಾಗಿದೆ. ಮುಂಗಾರು ಹಂಗಾಮಿನ ಆರಂಭದಲ್ಲಿ ಚಿಗುರೊಡೆದಿದ್ದ ರೈತರ ನಿರೀಕ್ಷೆಗಳನ್ನು ತೀವ್ರ ಮಳೆ ಕೊರತೆ ಕಸಿದುಕೊಂಡಿದ್ದು, ಇಡೀ ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ವಾಡಿಕೆಗಿಂತ ಶೇ. 32ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆಯಾಗಿದ್ದ ಬೆಳೆಗಳ ಪೈಕಿ ಶೇ. 80ರಷ್ಟು ಬೆಳೆ ಸಂಪೂರ್ಣ ಒಣಗಿವೆ.

ಜಿಲ್ಲೆಯಲ್ಲಿ ಒಟ್ಟು 2.50 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬಿತ್ತನೆ ಗುರಿ ಹೊಂದಲಾಗಿತ್ತು. ಆರಂಭದ ಮುಂಗಾರು ತುಂತುರು ನಂಬಿ ರೈತರು ಸಾಲ ಮಾಡಿ 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ(ಶೇ. 85ರಷ್ಟು) ಬಿತ್ತನೆ ಪೂರ್ಣಗೊಳಿಸಿದ್ದರು. ಜಿಲ್ಲೆಯ ಪ್ರಮುಖ ಬೆಳೆಗಳಾದ ಶೇಂಗಾ, ಹೆಸರು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಹಾಗೂ ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಉತ್ತಮವಾಗಿಯೇ ಮೊಳಕೆಯೊಡೆದಿದ್ದವು. ಆದರೆ, ಬೆಳೆ ಭೂಮಿಯಿಂದ ಮೇಲೆ ಬರುವ ಪೂರ್ವದಲ್ಲಿಯೇ ಕಳೆದ ಒಂದೂವರೆ ತಿಂಗಳಿಂದ ಮಳೆ ಸಂಪೂರ್ಣ ಮಾಯವಾಗಿದ್ದು, ಬೆಳೆಗಳೆಲ್ಲ ಒಣಗಿವೆ.

ಒಣಗಿದ ಬೆಳೆಗಳು: ಪ್ರತಿ ಎಕರೆಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿ ಕಾರ್ಮಿಕರ ಕೂಲಿಗಾಗಿ ರೈತರು 15ರಿಂದ 25 ಸಾವಿರದವರೆಗೆ ವೆಚ್ಚ ಮಾಡಿದ್ದಾರೆ. ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ನರಗುಂದ ಹಾಗೂ ಗಜೇಂದ್ರಗಡ ತಾಲೂಕುಗಳ ಬಹುತೇಕ ಭಾಗಗಳಲ್ಲಿ ಹೆಸರು ಮತ್ತು ಶೇಂಗಾ ಬೆಳೆಗಳು ಸಂಪೂರ್ಣ ನಾಶವಾಗಿವೆ. ತೋಟಗಾರಿಕಾ ಬೆಳೆಗಳು ಬೆಳೆಯುವ ಮೊದಲೇ ಒಣಗಿವೆ. ಇನ್ನು ಗತಿಯಿಲ್ಲದೆ ಒಣಗುತ್ತಿರುವ ಶೇಂಗಾ, ಮೆಕ್ಕೆಜೋಳ ಸೇರಿದಂತೆ ಇನ್ನುಳಿದ ಬೆಳೆಗಳನ್ನು ರೈತರು ಅನಿವಾರ್ಯವಾಗಿ ಜಾನುವಾರುಗಳನ್ನು ಮೇಯಿಸುತ್ತಿರುವುದು ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿ ಕಂಡುಬರುತ್ತಿದೆ.

ಬರಪೀಡಿತ ಘೋಷಣೆಗೆ ಆಗ್ರಹ: ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯಂತೆ ಜಿಲ್ಲಾದ್ಯಂತ ಒಟ್ಟು 218 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಯಮಾವಳಿಗಳ ಅನ್ವಯ ಎಕರೆವಾರು ವೈಜ್ಞಾನಿಕ ಪರಿಹಾರ ನೀಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ಹಣವನ್ನು ವಿಳಂಬವಿಲ್ಲದೇ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪರಿಹಾರ ನೀಡಿ: ರಾಜ್ಯ ಸರ್ಕಾರ ಕೇಂದ್ರ ಬರ ಅಧ್ಯಯನ ತಂಡದ ಸಮೀಕ್ಷೆ ಹಾಗೂ ಕೇಂದ್ರದ ಪರಿಹಾರಕ್ಕಾಗಿ ಕಾಯುತ್ತಾ ಕುಳಿತುಕೊಳ್ಳದೇ ತಕ್ಷಣವೇ ಪ್ರತಿ ಎಕರೆಗೆ 50 ಸಾವಿರ ಪರಿಹಾರವನ್ನು ಬಿಡುಗಡೆ ಮಾಡಬೇಕು. ಕೇಂದ್ರದಿಂದ ಅನುದಾನ ಬಂದ ನಂತರ ಅದನ್ನು ಹೊಂದಾಣಿಕೆ ಮಾಡಬೇಕು. ಗದಗ ಸೇರಿದಂತೆ ರಾಜ್ಯಾದ್ಯಂತ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.ಬರ ಅಧ್ಯಯನ: ನಾನೇ ಖುದ್ಧು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದೇನೆ, ರೈತರ ಸ್ಥಿತಿ ತೀರಾ ಕೆಟ್ಟದಾಗಿದೆ. ಜಿಲ್ಲಾಡಳಿತದ ಸಮೀಕ್ಷೆಯಲ್ಲಿ ಶೇ. 32ಕ್ಕಿಂತಲೂ ಹೆಚ್ಚಿನ ಮಳೆ ಕೊರತೆಯಾಗಿದೆ. 215 ಕೋಟಿಗೂ ಅಧಿಕ ಬೆಳೆಹಾನಿ ಸಂಭವಿಸಿದೆ ಎನ್ನುವ ವರದಿಯನ್ನು ಇತ್ತೀಚೆಗೆ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ. ಪ್ರಸ್ತುತ ಅಧಿವೇಶನ ನಡೆಯುತ್ತಿದೆ ಆ. 30ರ ನಂತರ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ, ರಾಜ್ಯದ ಬರದ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು, ಮಕ್ಕಳಿಂದ ಹೊಳೆ ಗಂಗಾ ಪೂಜೆ
ಕೂಲಿಕಾರರಿಗೆ ಸ್ಕೀಂನ ಲಾಭ ಪಡೆಯಲಿ: ಪಾಟೀಲ್