ಭಟ್ಕಳ: ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ತಂಪಿನ ವಾತಾವರಣ ಉಂಟಾಗುವುದರ ಜತೆಗೆ ಪಟ್ಟಣದ ವೃತ್ತ, ಮುಖ್ಯರಸ್ತೆ ಮುಂತಾದ ಕಡೆ ಮಳೆ ನೀರು ರಸ್ತೆ ಮೇಲೆ ಹರಿದಿದ್ದರಿಂದ ಜನರ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ಮಂಗಳವಾರ ಬೆಳಗ್ಗೆ 9ಗಂಟೆಯಿಂದ ಆರಂಭಗೊಂಡ ಮಳೆ ಸಂಜೆವರೆಗೂ ಬಿಡುವಿಲ್ಲದೇ ಸುರಿದಿದೆ. ಇಷ್ಟು ದಿನದ ಬಿಸಿಲ ತಾಪಮಾನದಿಂದ ಉಂಟಾದ ಸೆಕೆಯಿಂದ ಬಳಲಿದ್ದ ಜನತೆ ದಿನವಿಡೀ ಮಳೆ ಸುರಿದಿದ್ದರಿಂದ ತಂಪಿನ ವಾತಾವರಣ ಅನುಭವಿಸಿದರು. ದಿನವಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭಾರೀ ಮಳೆಗೆ ಬಾವಿ, ಕೆರೆ, ಹೊಳೆಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗಿದ್ದು ಕಂಡು ಬಂತು, ಮಂಗಳವಾರದ ಸತತ ಮಳೆಗೆ ಪಟ್ಟಣದ ಮುಖ್ಯವೃತ್ತ, ಮುಖ್ಯರಸ್ತೆ ಮುಂತಾದ ಕಡೆ ರಸ್ತೆ ಮೇಲೆ ನೀರು ನಿಂತು ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.ಪಟ್ಟಣದ ಬಂದರ ರಸ್ತೆಯಿಂದ ಸಾಗರ ರಸ್ತೆಯ ಪೊಲೀಸ್ ವಸತಿಗೃಹದವರೆಗೆ ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗುತ್ತಿದ್ದು, ಈ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದ್ದರಿಂದ ನೀರು ಎಲ್ಲ ಕಡೆ ಹರಿಯುವಂತಾಗಿದೆ. ವೃತ್ತದಲ್ಲಿ ವರ್ಷಂಪ್ರತಿ ಮಳೆಗಾಲದಂತೆ ಈ ಸಲವೂ ಸಹ ಪ್ರಥಮ ಮಳೆಗೆ ನೀರು ಹೆದ್ದಾರಿಯಲ್ಲಿ ತುಂಬಿ ವಾಹನಿಗರು ತೊಂದರೆ ಪಟ್ಟರು. ವೃತ್ತದ ಒಂದು ಬದಿಯಲ್ಲಿ ಮೊಣಕಾಲಿನ ವರೆಗೆ ನೀರು ತುಂಬಿದ್ದು, ಅಂಗಡಿಕಾರರು, ಸಾರ್ವಜನಿಕರು, ವಾಹನಿಗರು ಪರದಾಡುವಂತಾಯಿತು.
ವ್ಯಾಪಕ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಪಟ್ಟಣದಲ್ಲಿ ಸಮರ್ಪಕವಾಗಿ ಗಟಾರದ ಹೂಳು ತೆಗೆಯದೇ ಇರುವುದರಿಂದ ಕೆಲ ಮಳೆ ನೀರು ರಸ್ತೆ ಮೇಲೆಯೇ ಹರಿಯುವಂತಾಯಿತು. ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪಲೈನ್ ಕಾಮಾಗಾರಿಗಾಗಿ ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಸರಿಯಾಗಿ ಮುಚ್ಚಿರದ ಕಾರಣ ಮೊದಲ ಮಳೆಗೆ ರಸ್ತೆಗಳು ಕೆಸರುಮಯವಾಗಿತ್ತು.ತಾಲೂಕಿನ ಗ್ರಾಮಾಂತರ ಭಾಗದಲ್ಲೂ ಸಹ ಗಟಾರದ ಹೂಳು ತೆಗೆಯದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಮಳೆ ಬಂದು ಹೋದ ಮೇಲೆ ರಸ್ತೆ ಮೇಲೆ ಕಸ, ಕಡ್ಡಿ, ಕಲ್ಲು,ಮಣ್ಣಿನ ರಾಶಿ ರಸ್ತೆಯ ಮೇಲೆ ಬಂದು ಬಿದ್ದಿದ್ದು, ಕೆಲವು ಕಡೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಹೊಳೆ, ಬಾವಿಗಳಲ್ಲಿ ನೀರಿಲ್ಲದೇ ತೋಟಕ್ಕೆ ನೀರುಣಿಸಲು ಕಷ್ಟವಾಗಿತ್ತು. ಇದೀಗ ದಿನವಿಡೀ ಮಳೆ ಸುರಿದಿದ್ದರಿಂದ ಬಿಸಿಲ ತಾಪಮಾನದಿಂದ ಒಣಗುತ್ತಿದ್ದ ತೋಟಕ್ಕೆ ಅನುಕೂಲವಾಗಿದೆ.ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರೀ ಮಳೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಿದೆ.
ಕೃಷಿ ಇಲಾಖೆಯಿಂದ ಮಾವಳ್ಳಿ ಮತ್ತು ಸೂಸಗಡಿ ಗ್ರಾಮದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯ ಆರಂಭಿಸಲಾಗಿದೆ. ರೈತರು ಮಳೆಗಾಗಿ ಕಾಯುತ್ತಿದ್ದರು. ಸುರಿಯುತ್ತಿರುವ ಉತ್ತಮ ಮಳೆಯಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಸಕಾಲದಲ್ಲಿ ಮಳೆ ಬಂದಿದ್ದರಿಂದ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ.