ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿದ್ದ ನಿರಂತರ ವರ್ಷಧಾರೆ ಶುಕ್ರವಾರ ರಾತ್ರಿಯಿಂದ ಇಳಿಮುಖವಾಗಿದೆ. ಭಾರತೀಯ ಹವಾಮಾನ ಇಲಾಖೆ ಜು.21 ಮತ್ತು 22ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.ದ.ಕ.ಜಿಲ್ಲೆಯಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಿದರೂ ಭಾರಿ ಮಳೆಯಾಗಿಲ್ಲ. ಆದರೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಲ್ಲಿವರೆಗೆ ಭಾರಿ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಶನಿವಾರ ದೂರವಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿದ್ದು, ನೆರೆಯ ಭೀತಿಯಲ್ಲಿದ್ದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ.ನೀರು ನುಗ್ಗಿರುವ ಪ್ರದೇಶಗಳ ಮನೆ ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವ್ಯಾಪಕ ಮಳೆಯಿಂದ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತಡೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ನಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಸಂಪಾಜೆ ಘಾಟಿಯಲ್ಲಿ ರಾತ್ರಿ 8ರ ಬಳಿಕ ವಾಹನ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಮಂಗಳೂರಿನ ಕೆತ್ತಿಕಲ್ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿಯೂ ಎದುರಾಗಿದೆ.
ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಸಂಜೆ ವೇಳೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಗುರ ಮಳೆಯಾಗಿದೆ.ಮಳೆ ಅವಾಂತರಕ್ಕೆ 10 ಮಂದಿ ಸಾವು: ಭಾರೀ ಮಳೆಯಿಂದಾಗಿ ಸಂಭವಿಸಿದ ಅವಘಡಗಳಿಂದ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಪೈಕಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ನಾಲ್ವರು ಸಾವಿಗೀಡಾಗಿದ್ದಾರೆ.ಶಿರಾಡಿ ಘಾಟ್ ಪ್ರದೇಶ ಮತ್ತು ಕುಮಾರ ಪರ್ವತ ಶ್ರೇಣಿ ಪ್ರದೇಶಗಳಲ್ಲಿ ಮಳೆಯ ಆರ್ಭಟದಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ.ಉಳ್ಳಾಲ ಗರಿಷ್ಠ ಮಳೆ: ಶನಿವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಕಡಬ ಗರಿಷ್ಠ 75.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 56.9 ಮಿ.ಮೀ. ಆಗಿದೆ.ಬೆಳ್ತಂಗಡಿ 54.3 ಮಿ.ಮೀ, ಬಂಟ್ವಾಳ 49.3 ಮಿ.ಮೀ, ಮಂಗಳೂರು 36.3 ಮಿ.ಮೀ, ಪುತ್ತೂರು 56.6 ಮಿ.ಮೀ, ಮೂಡುಬಿದಿರೆ 31.4 ಮಿ.ಮೀ, ಸುಳ್ಯ 73.7 ಮಿ.ಮೀ, ಮೂಲ್ಕಿ 35.1 ಮಿ.ಮೀ, ಉಳ್ಳಾಲ 58.9 ಮಿ.ಮೀ. ಮಳೆ ದಾಖಲಾಗಿದೆ.
ಉಪ್ಪಿನಂಗಡಿ: ನದಿಗಳ ನೀರಿನ ಮಟ್ಟ ಇಳಿಕೆಉಪ್ಪಿನಂಗಡಿ: ಶುಕ್ರವಾರ ನೆರೆ ಭೀತಿಯನ್ನು ಮೂಡಿಸಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದ್ದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟವು ಶನಿವಾರದಂದು ಗಮನಾರ್ಹ ಕುಸಿತ ಕಂಡು ಸಮುದ್ರಮಟ್ಟಕ್ಕಿಂತ ೨೭.೩ ಎತ್ತರದಲ್ಲಿ ದಾಖಲಾಗಿದೆ.
ಶುಕ್ರವಾರ ರಾತ್ರಿಯಿಂದಲೇ ಮಳೆ ಪ್ರಮಾಣ ಕಡಿಮೆಯಾಗಿದ್ದು, ನೀರಿನ ಮಟ್ಟದಲ್ಲಿ ಇಳಿಮುಖವಾಗ ತೊಡಗಿತು. ಶನಿವಾರ ಸಂಜೆ ತನಕ ಮಳೆ ಇಲ್ಲದ ಪರಿಣಾಮ ಒಂದೇ ಸಮನೆ ಇಳಿಮುಖ ಕಂಡ ನದಿ ನೀರಿನ ಮಟ್ಟವು ಸಂಜೆ ವೇಳೆಗೆ ೨೭.೩ ಮೀಟರ್ ನಷ್ಟಿತ್ತು.ಶುಕ್ರವಾರ ಉಪ್ಪಿನಂಗಡಿ ಭೇಟಿ ನೀಡಿದ್ದ ಜಿಲ್ಲಾಧಿಕಾರಿಳ ಸೂಚನೆಯಂತೆ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವು ಮಾಡಲಾಯಿತು.