ಇಳಿದ ಮಳೆ, ನದಿಗಳಲ್ಲಿ ನೀರಿನ ಮಟ್ಟ ಇಳಿಕೆ

KannadaprabhaNewsNetwork |  
Published : Jul 24, 2024, 12:23 AM IST
ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಮದ ಐತಿಹಾಸಿಕ ಪುರಾತನ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಗುಡ್ಡ ಕುಸಿದಿರುವುದು. | Kannada Prabha

ಸಾರಾಂಶ

ಮಂಗಳವಾರ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ಆಗೊಮ್ಮೆ ಈಗೊಮ್ಮೆ ಮಾತ್ರ ಮಳೆ ಬರುತ್ತಿದೆ. ಗಂಗಾವಳಿ, ಅಘನಾಶಿನಿ, ಚಂಡಿಕಾ, ಗುಂಡಬಾಳ, ಬಡಗಣಿ ನದಿಗಳ ನೀರಿನ ಮಟ್ಟ ಇಳಿದಿದೆ.

ಕಾರವಾರ: ಜಿಲ್ಲಾದ್ಯಂತ ಮಳೆ ಇಳಿಮುಖವಾಗಿದೆ. ಆದರೆ ಗುಡ್ಡ ಕುಸಿತ, ಆರಂಭವಾಗದ ಹೆದ್ದಾರಿ ಸಂಚಾರ, ಕುಸಿದ ಮನೆಗಳು, ಜಲಾವೃತವಾಗಿದ್ದ ಮನೆಗಳು, ಅಡಕೆ, ತೆಂಗಿನ ತೋಟಗಳನ್ನು ಸರಿಪಡಿಸಿಕೊಳ್ಳಲು ಇನ್ನೂ ಸಮಯ ಬೇಕಾಗಿರುವುದರಿಂದ ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಮಂಗಳವಾರ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ಆಗೊಮ್ಮೆ ಈಗೊಮ್ಮೆ ಮಾತ್ರ ಮಳೆ ಬರುತ್ತಿದೆ. ಗಂಗಾವಳಿ, ಅಘನಾಶಿನಿ, ಚಂಡಿಕಾ, ಗುಂಡಬಾಳ, ಬಡಗಣಿ ನದಿಗಳ ನೀರಿನ ಮಟ್ಟ ಇಳಿದಿದೆ. ಮೂರು ಕಾಳಜಿ ಕೇಂದ್ರಗಳಲ್ಲಿ 391 ಜನರು ಆಶ್ರಯ ಪಡೆದಿದ್ದಾರೆ. ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಸಂಚಾರ ಆರಂಭವಾಗಿಲ್ಲ. ಕಾರವಾರ- ಇಳಕಲ್‌ ರಸ್ತೆಯಲ್ಲೂ ಗುಡ್ಡ ಕುಸಿತ ಸಂಪೂರ್ಣ ತೆರವಾಗದ ಕಾರಣ ಸಂಚಾರ ಸ್ಥಗಿತವಾಗಿಯೇ ಇದೆ.

ದೇವಸ್ಥಾನ ಬಳಿ ಗುಡ್ಡ ಕುಸಿತ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಮದ ಐತಿಹಾಸಿಕ ಪುರಾತನ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಗುಡ್ಡ ಕುಸಿದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಸುಮಾರು ೨೦ ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡಸಗಾಂವ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ರಂಗಮಂದಿರ ಮತ್ತು ಸಭಾಭವನದ ಹಿಂದಿನ ಗುಡ್ಡ ಕಳೆದ ಒಂದು ವಾರದಿಂದ ಸಣ್ಣದಾಗಿ ಕುಸಿಯುತ್ತಿದೆ. ಗುಡ್ಡ ಕುಸಿಯುತ್ತಿರುವ ಬಗ್ಗೆ ಮಾಹಿತಿ ಪಡೆದ ನೋಡಲ್ ಅಧಿಕಾರಿ ರಾಜೇಶ್ವರಿ ಕದಂ ಅವರು ಮಂಗಳವಾರ ಬೆಡಸಗಾಂವಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಇಬ್ಬರಿಗೆ ಗಾಯ: ಧಾರಾಕಾರ ಮಳೆಯಿಂದಾಗಿ ಮನೆಯ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದು, ಮನೆಗೆ ತೀವ್ರ ಹಾನಿಯಾದ ಘಟನೆ ಮುಂಡಗೋಡ ತಾಲೂಕಿನ ಪಾಳಾ ಕ್ರಾಸ್ ಹೊಸನಗರ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಕೂಡಲೇ ಗಾಯಾಳುಗಳನ್ನು ಪಾಳಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಬಿರುಗಾಳಿ ಸಹಿತ ಮಳೆ

ಕಾರವಾರ: ನಗರದಲ್ಲಿ ರಾತ್ರಿ 8 ಗಂಟೆ ವೇಳೆಗೆ ಭಾರಿ ಬಿರುಗಾಳಿ, ಮಳೆ ಉಂಟಾಗಿದ್ದು, ನಗರದ ಎಲ್ಲೆಡೆ ವಿದ್ಯುತ್ ವ್ಯತ್ಯಯವಾಗಿದೆ. ಕೆಲವು ದಿನಗಳಿಂದ ವಿದ್ಯುತ್ ಆಗಾಗ ವ್ಯತ್ಯಯವಾಗುತ್ತಿದೆ. ದಿನಕ್ಕೆ ಹತ್ತಾರು ಬಾರಿ ವಿದ್ಯುತ್ ಕೈಕೊಡುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಜನತೆ ತೀವ್ರ ತೊಂದರೆಗೊಳಗಾಗಿದ್ದು, ಹೆಸ್ಕಾಂ ವಿರುದ್ಧ ಆಕ್ರೋಶ ಹೆಚ್ಚುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ