ಕನಕಗಿರಿಯಲ್ಲಿ ಕೃಷಿ ಚಟುವಟಿಕೆಗೆ ವರವಾದ ಕೃತಿಕಾ!

KannadaprabhaNewsNetwork |  
Published : May 18, 2024, 12:38 AM IST
೧೭ಕೆಎನ್‌ಕೆ-೧                                                                                            ಮಳೆ ನೀರಿನಿಂದ ಜಲಾವೃತವಾಗಿರುವ ಕನಕಗಿರಿ ತಾಲೂಕಿನ ತಿಪ್ಪನಾಳ ಸರ್ಕಾರಿ ಶಾಲೆ.  | Kannada Prabha

ಸಾರಾಂಶ

ಕನಕಗಿರಿ ತಾಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು, ತೀವ್ರ ಉಷ್ಣಾಂಶದಲ್ಲಿದ್ದ ಭೂಮಿ ತಂಪಾಗಿದ್ದಲ್ಲದೆ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.

ಕನಕಗಿರಿ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು, ತೀವ್ರ ಉಷ್ಣಾಂಶದಲ್ಲಿದ್ದ ಭೂಮಿ ತಂಪಾಗಿದ್ದಲ್ಲದೆ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.

ಕಳೆದ ವಾರದಿಂದ ತಾಲೂಕಿನ ಹುಲಿಹೈದರ, ಕನಕಗಿರಿ ಹಾಗೂ ನವಲಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ೪೦ರ ಆಸುಪಾಸಿನಲ್ಲಿ ಇರುತ್ತಿದ್ದ ತಾಪಮಾನ ಈ ಬಾರಿ ೪೪ಕ್ಕೆ ಹೆಚ್ಚಳವಾಗಿತ್ತು. ವಾರದಿಂದ ತಾಲೂಕಿನೆಲ್ಲೆಡೆ ಮಳೆಯಾಗುತ್ತಿದ್ದು, ಭೂಮಿತಾಯಿ ತಂಪಾಗಿದ್ದಾಳೆ. ಮೂರ‍್ನಾಲ್ಕು ತಿಂಗಳಿಂದ ಸುಮ್ಮನೆ ಕುಳಿತಿದ್ದ ರೈತರಿಗೆ ಈಗ ಕೆಲಸ ಆರಂಭವಾಗಿದೆ. ಕುಲುಮೆ, ಬಡಿಗ ಕೆಲಸಗಾರರು, ಬೀಜ, ರಸಗೊಬ್ಬರ ಮಾರಾಟಗಾರರು ಬ್ಯೂಸಿಯಾಗಿದ್ದಾರೆ.

ಮಳೆಗಿಂತ ಮೊದಲು ತಮ್ಮ ಹೊಲ, ತೋಟಗಳನ್ನು ಹದಗೊಳಿಸಿದ್ದ ರೈತರು ಎತ್ತು ಹಾಗೂ ಟ್ರ್ಯಾಕ್ಟರ್‌ನಿಂದ ಬಿತ್ತನೆ ಕಾರ್ಯ ನಡೆಸಿದ್ದಾರೆ. ಔಡಲ, ಎಳ್ಳು ಹಾಗೂ ಹೆಸರು ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. ಗುರುವಾರ ಸುರಿದ ಮಳೆಗೆ ಎರಿ ಭೂಮಿ ಸಂಪೂರ್ಣ ಹಸಿಯಾಗಿದೆ. ಮಸಾರಿ ಭೂಮಿ ಅರೆ-ಬರೆ ಹಸಿಯಾಗಿರುವುದು ಕಂಡು ಬಂದಿದೆ.

ತುಂಬಿದ ಕೃಷಿ ಹೊಂಡಗಳು: ವಾರದಿಂದ ಸುರಿದ ಮಳೆಗೆ ನವಲಿ ಭಾಗದ ರೈತರು ನಿರ್ಮಿಸಿಕೊಂಡ ಕೃಷಿಹೊಂಡಗಳು ತುಂಬಿವೆ. ಹುಲಿಹೈದರ ಹಾಗೂ ಕನಕಗಿರಿ ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಕೃಷಿ ಚಟುವಟಿಕೆಗೆ ಕೃತಿಕಾ ಮಳೆ ರೈತನ ಕೈ ಹಿಡಿದಿದೆ. ಶುಕ್ರವಾರವೂ ವಾತಾವರಣದಲ್ಲಿ ಸೆಕೆ ಹಾಗೂ ಬಿಸಿಲು ಕಾಣಿಸಿಕೊಂಡಿದ್ದು, ಮತ್ತೆ ಮಳೆಯಾಗುವ ಮನ್ಸೂಚನೆ ನೀಡಿದೆ.

ತಗ್ಗು ಪ್ರದೇಶಗಳು ಜಲಾವೃತ: ಹಿರೇಖೇಡ, ಗುಡದೂರು, ಜರ‍್ಹಾಳ, ತಿಪ್ಪನಾಳ, ಲಾಯದುಣಸಿ ಸೇರಿದಂತೆ ತಾಲೂಕಿನ ನಾನಾ ಹಳ್ಳ-ಕೊಳ್ಳಗಳಿಗೆ ನೀರು ಬಂದಿದೆ. ಶಾಲೆ ಮೈದಾನ, ಗ್ರಾಪಂ ಆವರಣ, ವಿವಿಧ ಓಣಿ, ವಾರ್ಡ್‌ಗಳಲ್ಲಿ ಹಾಗೂ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿವೆ.

ನಿಟ್ಟುಸಿರು ಬಿಟ್ಟ ಜನತೆ: ರಣ ಬಿಸಿಲಿಗೆ ತತ್ತರಿಸಿದ್ದ ಜನತೆ ಕೃತಿಕಾ ಮಳೆ ಧರೆಗಿಳಿದು ತಂಪಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ಬಿಸಿಲಿನ ತಾಪ ಸಹಿಸಿಕೊಳ್ಳದೆ ಕುತ್ತುಸಿರು ಬಿಡುತ್ತಿದ್ದವರು ಈಗ ಮಳೆರಾಯನ ಕೃಪೆಯಿಂದ ತಣ್ಣಗಾಗಿದ್ದಾರೆ. ಕಾದು ಕೆಂಡವಾಗುತ್ತಿದ್ದ ರಸ್ತೆಗಳು ಮಳೆಯಿಂದ ತಂಪಾಗಿವೆ. ಎರಡ್ಮೂರು ಬಾರಿ ಸುರಿದ ಮಳೆಯಿಂದಾಗಿ ಭೂಮಿ ಹಾಗೂ ವಾತಾವರಣ ಬದಲಾಗಿದೆ ಎನ್ನುತ್ತಾರೆ ಕನಕಗಿರಿ ಜನತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ
.ರಾಜ್ಯದ ಕಾಂಗ್ರೆಸ್‌ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ