ತಾಲೂಕಿನಲ್ಲಿ ಈವೆರೆಗೂ ಕೃಷಿಗೆ ಪೂರಕ ಹದವಾದ ಉತ್ತಮ ಮಳೆಯಾಗಿದ್ದು, ರೈತ ಸಮುದಾಯವೀಗ ಭೂಮಿ ಹಸನುಗೊಳಿಸುವ ಮೂಲಕ ಬಿತ್ತನೆ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಹೆಚ್ಚಿನ ಪ್ರಮಾಣದಲ್ಲಿ ಬತ್ತ, ಗೋವಿನ ಜೋಳ ಬಿತ್ತನೆಗೆ ಸಿದ್ಧತೆ
ಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡ
ತಾಲೂಕಿನಲ್ಲಿ ಈವೆರೆಗೂ ಕೃಷಿಗೆ ಪೂರಕ ಹದವಾದ ಉತ್ತಮ ಮಳೆಯಾಗಿದ್ದು, ರೈತ ಸಮುದಾಯವೀಗ ಭೂಮಿ ಹಸನುಗೊಳಿಸುವ ಮೂಲಕ ಬಿತ್ತನೆ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಈ ಬಾರಿ ಅಡ್ಡ ಮಳೆಗಳು ಕೂಡ ಉತ್ತಮವಾಗಿರುವುದರಿಂದ ರೈತರಲ್ಲಿ ಭರವಸೆ ಮೂಡಿದ್ದು, ಮುಂಗಾರು ಮಳೆ ಹಿಡಿದುಕೊಂಡರೆ ಬಿತ್ತನೆಗೆ ಹಿನ್ನಡೆಯಾಗುತ್ತದೆ ಎಂದು ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾದ ಬೆನ್ನಲ್ಲೆ ಎಲ್ಲೆಂದರಲ್ಲಿ ಈಗ ಬತ್ತ ಹಾಗೂ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಗೆ ಸಿದ್ಧಗೊಳಿಸಲಾಗಿದೆ.
ತಾಲೂಕಿನಲ್ಲಿ ಹಿಂದೆಲ್ಲ ಶೇ. ೮೦ರಷ್ಟು ಭೂಮಿಯಲ್ಲಿ ಬತ್ತವನ್ನೇ ಬೆಳೆಯಲಾಗುತ್ತಿತ್ತು, ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಅನಾವೃಷ್ಟಿ ಎದುರಾಗಿದ್ದರಿಂದ ಗೋವಿನ ಜೋಳ ಬಿತ್ತನೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ. ತಾಲೂಕಿನಲ್ಲಿ ಸುಮಾರು ೧೫೦೦೦ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ಬತ್ತ, ೫೦೦೦ ಹೆಕ್ಟೇರ್ ಗೋವಿನಜೋಳ, ೩೦೦೦ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಾರೆ. ಉಳಿದ ಪ್ರದೇಶದಲ್ಲಿ ಶುಂಠಿ, ಶೇಂಗಾ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬಗೆಯ ಬೆಳೆ ಬೆಳೆಯುತ್ತಾರೆ.
ತಾಲೂಕಿನಲ್ಲಿ ಚಿಕ್ಕ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರೀಕ್ಷೆಯಿಂದ ರೈತರು ಈಗ ಭೂಮಿಯನ್ನು ಹಸನಾಗಿಸಿ ಬಿತ್ತನೆಗೆ ಸಿದ್ಧಗೊಳಿಸುತ್ತಿದ್ದು, ಸದ್ಯ ಟ್ರ‍್ಯಾಕ್ಟರ್ (ರೂಟರ್) ಹಾಗೂ ಜಾನುವಾರುಗಳ ಮೂಲಕ ನೇಗಿಲು ಹೊಡೆದು ಭೂಮಿಯನ್ನು ಹಸನಾಗಿಸುವ ಕಾರ್ಯವನ್ನು ನಡೆಸಿರುವುದು ಕಂಡು ಬರುತ್ತಿದೆ. ತಾಲೂಕಿನಲ್ಲಿ ಬತ್ತ ಬೆಳೆಗಾರರಿಂದ ಮೇ ತಿಂಗಳ ಅಂತ್ಯದೊಳಗೆ ಒಣ ಬಿತ್ತನೆ ನಡೆಯುತ್ತದೆ. ಮೃಗಶೀರ ಮಳೆ ಆರಂಭವಾಗುವ ಮೊದಲು ಒಣ ಭೂಮಿಯಲ್ಲಿ ಬತ್ತದ ಬೀಜ ಬಿತ್ತನೆ ಮಾಡುತ್ತಾರೆ.
ಈವೆರೆಗೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ರೈತರಿಂದ ಈಗಾಗಲೇ ಶೇ .೭೫ ರಷ್ಟು ಭೂಮಿ ಹಸನುಗೊಳಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದ್ದು, ಒಣ ಬಿತ್ತನೆ ಕಾರ್ಯ ಕೂಡ ಅಲ್ಲಲ್ಲಿ ನಡೆದಿದ್ದು, ಮತ್ತೆ ಮಳೆಯಾದರೆ ಇನ್ನೊಂದು ವಾರದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.