ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಕೊಡಗಿನ ವಿವಿಧ ಕಡೆಗಳಲ್ಲಿ ಮತ್ತೆ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದೆ. ಪಕ್ಕದ ಕೇರಳದ ವಯನಾಡಿನಲ್ಲಿ ಜಲಸ್ಫೋಟವಾಗಿ ಅಪಾರ ಸಾವು ನೋವು ಸಂಭವಿಸಿದ್ದು, ಕೊಡಗಿನಲ್ಲೂ ಭಾರಿ ಮಳೆಯಿಂದಾಗಿ ಜನರು ಆತಂಕಗೊಂಡಿದ್ದಾರೆ.ಇನ್ನೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮತ್ತೆ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್ ಅರರ್ಟ್ ಘೋಷಣೆ ಮಾಡಲಾಗಿದೆ. 24 ಗಂಟೆ ಅವಧಿಯಲ್ಲಿ 210 ಮಿಲಿ ಮೀಟರ್‌ಗೂ ಅಧಿಕ ಮಳೆಯಾಗುವ ಸಾಧ್ಯತೆ ಹೇಳಲಾಗಿದೆ.
ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುಮಾರು 27 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.ಭಾರಿ ಮಳೆಯಿಂದಾಗಿ ಭಾಗಮಂಡಲ ಜಲಾವೃತಗೊಂಡಿದೆ. ಇಲ್ಲಿನ ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನ ವರೆಗೂ ಕಾವೇರಿ ನದಿ ನೀರಿನ ಪ್ರವಾಹ ಬಂದಿದ್ದು, ಮಂಗಳವಾರ ಇಲ್ಲಿನ ಅರ್ಚಕರು ಕಾವೇರಿಗೆ ಶಾಂತಳಾಗುವಂತೆ ಪೂಜೆ ಸಲ್ಲಿಸಿದರು. ಭಗಂಡೇಶ್ವರ ದೇವಾಲಯದ ಅರ್ಚಕ ಹರೀಶ್ ಭಟ್ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಕೆಯಾಗಿದೆ. ಭಾಗಮಂಡದಲ್ಲಿ ಮನೆ ಹಾಗೂ ಅಂಗಡಿಗಳಿಗೂ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮೇಲು ಸೇತುವೆ ಇರುವುದರಿಂದ ರಸ್ತೆ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ.
ಹಾರಂಗಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರಿ ಬಿಡುತ್ತಿರುವ ಪರಿಣಾಮ ಕುಶಾಲನಗರದ ಸಾಯಿ ಬಡಾವಣೆ ಜಲಾವೃತಗೊಳ್ಳುತ್ತಿದೆ. ಈಗಾಗಲೇ ನೀರು ಮನೆಗಳಿಗೆ ನುಗ್ಗಿದ್ದು, ಈ ಭಾಗದಲ್ಲೂ ಕೂಡ ಜನ ಜೀವನ ಅಸ್ತವ್ಯಸ್ತಗೊಂಡಿದೆ.ಮಡಿಕೇರಿ ತಾಲೂಕಿನ ಮೂರ್ನಾಡು- ನಾಪೋಕ್ಲು ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಸಂಪರ್ಕ ಬಂದ್ ಮಾಡಲಾಗಿದೆ.
ಮಡಿಕೇರಿ-ವಿರಾಜಪೇಟೆ ನಡುವೆ ಸಂಪರ್ಕ ಕಲ್ಪಿಸುವ ಭೇತ್ರಿ ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಿದೆ. ಈಗಾಗಲೇ ಸೇತುವೆ ವರೆಗೆ ಕಾವೇರಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಒಂದುವರೆಯಿಂದ ಎರಡು ಅಡಿ ನೀರು ಬಂದಲ್ಲಿ ಸೇತುವೆ ಮುಳುಗಡೆಯಾಗಲಿದೆ. ಈಗಾಗಲೇ ನದಿ ತಟದ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ನದಿ ಹರಿಯುವಿಕೆಯಲ್ಲಿ ಜಾಸ್ತಿಯಾದರೆ ಭೇತ್ರಿ ಗ್ರಾಮವೂ ಜಲಾವೃತವಾಗುವ ಸಾಧ್ಯತೆ ಎದುರಾಗಿದ್ದು, ಭೇತ್ರಿ ಜನರು ಆತಂಕದಲ್ಲಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಬೆಳಿಗ್ಗೆ 8 ಗಂಟೆವರೆಗೆ 5. 5 ಇಂಚು ಪ್ರಮಾಣದಲ್ಲಿ ಸುರಿದ ಭೀಕರ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಉಕ್ಕಿ ಹರಿದು ಹೆಮ್ಮಾಡು ಗ್ರಾಮಕ್ಕೆ ಪ್ರವಾಹ ಭೀತಿ ಉಂಟಾಗಿದೆ.ಭೇತ್ರಿ ಹೆಮ್ಮಾಡು ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದೆ. ಈಗಾಗಲೇ ಹೆಮ್ಮಾಡಿ ಸಂಪರ್ಕಿಸುವ ಹಳೇ ಸೇತುವೆ ಮುಳುಗಡೆಗೊಂಡಿದೆ. ಅಕ್ಕಪಕ್ಕದ ಕಾಫಿ ತೋಟಗಳಿಗೆ ಕಾವೇರಿ ಪ್ರವಾಹ ನುಗ್ಗಿದೆ. ರಸ್ತೆ ಸಂಪರ್ಕ ಕಡಿತವಾದರೆ ವಾರಗಟ್ಟಲೆ ನಮ್ಮೂರು ಅಂಡಮಾನ್ ರೀತಿ ಆಗುತ್ತದೆ. ದ್ವೀಪದಂತೆ ನದಿ ನೀರು ಗ್ರಾಮವನ್ನು ಸುತ್ತುವರಿಯುತ್ತದೆ. ಹೀಗಾಗಿ ವಾರಕ್ಕೆ ಆಗುವಷ್ಟು ಅಗತ್ಯ ವಸ್ತು ತಂದಿರಿಸಿಕೊಂಡಿದ್ದೇವೆ. ದಯಮಾಡಿ ರಸ್ತೆ ಎತ್ತರಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ದಕ್ಷಿಣ ಕೊಡಗಿನಲ್ಲೂ ಕೂಡ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಬೆಸಗೂರಿಗೆ ಸಂಪರ್ಕಿಸುವ ಮುಖ್ಯರಸ್ತೆ ಪ್ರವಾಹಕ್ಕೆ ಒಳಗಾಗಿದೆ.ಮನೆಗಳಿಗೆ ಹಾನಿ: ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದ ಅಭಿದ್ ತಂಗಳ್ ಅವರ ವಾಸದ ಮನೆಯು ಮಳೆಗೆ ಹಾನಿಯಾಗಿದೆ. ಭಾಗಮಂಡಲ ಹೋಬಳಿ ತಣ್ಣಿಮಾನಿ ಗ್ರಾಮದ ಕೆ ಪಿ ತಮ್ಮಯ್ಯ ಬಿನ್ ಪೊನ್ನಪ್ಪ ಇವರ ವಾಸದ ಮನೆಯು ಮಳೆಯಿಂದ ಮೇಲ್ಛಾವಣಿ ಕುಸಿದು ತೀವ್ರ ಹಾನಿ ಆಗಿದೆ.
ಪೊನ್ನಂಪೇಟೆ ತಾಲೂಕಿನಲ್ಲ ಕುಟ್ಟಂದಿ ಗ್ರಾಮದ ಎ.ಎಸ್.ಮಾಚಯ್ಯ ರವರ ಮನೆಯ ಗೋಡೆಗಳು ಕುಸಿದಿದ್ದು ಸಂಪೂರ್ಣ ಮನೆ ಬೀಳುವ ಹಂತದಲ್ಲಿದ್ದು, ಕುಟುಂಬದವರನ್ನು ಸ್ಥಳಾಂತರ ಮಾಡಲಾಗಿದೆ.ಚೆರಿಯಾಪರಂಬುವಿನಲ್ಲಿ ಅಂದಾಜು ನಾಲ್ಕು ಅಡಿ ನೀರು ಇದ್ದು ರಸ್ತೆ ಸಂಚಾರ ಕಲ್ಲುಮೊಟ್ಟೆ ಮಾರ್ಗವಾಗಿ ತೇರಳುತ್ತಿರುತ್ತಾರೆ.
ಆರು ಮಂದಿಯ ರಕ್ಷಣೆಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬಿನ 6 ಜನರ ರಕ್ಷಣೆ ಮಾಡಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
......................ಕೆಲವು ಕಡೆಗಳಲ್ಲಿ ಲಘು ಭೂಕುಸಿತ!ಪಕ್ಕದ ಕೇರಳ ರಾಜ್ಯದಲ್ಲಿ ದೊಡ್ಡ ಭೂಕುಸಿತ ಸಂಭವಿಸಿ ಅಪಾರ ಮಂದಿ ಮೃತ ಪಟ್ಟಿದ್ದಾರೆ. ಇತ್ತ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಬೆಟ್ಟಗೇರಿ ಪಂಚಾಯಿತಿ ವ್ಯಾಪ್ತಿಯ ಕುಂಬಾರಕೊಪ್ಪ ರಸ್ತೆ ಬದಿಯಲ್ಲಿ ಬರೆ ಕುಸಿತ ಉಂಟಾಗಿದೆ. ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಮಾಜಿಕೋಡಿಯ ಹೊಸಗದ್ದೆಯಲ್ಲೂ ಕೂಡಭೂಕುಸಿತ ಉಂಟಾಗಿದೆ. ಭಾಗಮಂಡಲ ಸಮೀಪದ ಅಯ್ಯಂಗೇರಿಯ ಬಿದ್ದಿಯಂಡ ರವಿ ಅವರ ತೋಟದಲ್ಲಿ ಭೂಕುಸಿತ ಉಂಟಾಗಿದೆ.
ರಸ್ತೆಗಳ ಮೇಲೆ ಮಣ್ಣು ಕುಸಿತ :*ಮಡಿಕೇರಿ ತಾಲೂಕಿನ ಪೆರಾಜೆ - ಆಲೆಟ್ಟಿ ರಸ್ತೆಯಲ್ಲಿ ಬರೆ ಕುಸಿತ ಉಂಟಾಗಿದೆ.
*ಮದೆ-ಬೆಟ್ಟತ್ತೂರು-ಕೊಳಗದಾಳು-ಚೇರಂಬಾಣೆ ರಸ್ತೆಯಲ್ಲಿ ಬರೆ ಕುಸಿತ ಉಂಟಾಗಿದ್ದು, ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲಾಗಿದೆ.*ವಿರಾಜಪೇಟೆ-ಬೈಂದೂರು ರಸ್ತೆಯ ಬಾಡಗ ಗ್ರಾಮದ ಸಮೀಪ ರಸ್ತೆಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಮರಳು ಮೂಟೆಗಳನ್ನು ಹಾಕಲಾಗಿದೆ.
*ವಿರಾಜಪೇಟೆ - ಬೈಂದೂರು ರಸ್ತೆಯ ಮೂರ್ನಾಡು ಸಮೀಪ ಚರಂಡಿ ಬ್ಲಾಕ್ ಆದ ಹಿನ್ನೆಲೆಯಲ್ಲಿ ಸರಿಪಡಿಸಲಾಗಿದೆ.