ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ಕಣಕುಂಬಿ, ಜಾಂಬೋಟಿ, ಲೋಂಡಾ ಮತ್ತು ಭೀಮಗಡ ಅರಣ್ಯಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದ ಕಾರಣ ಈ ಅರಣ್ಯಗಳ ವ್ಯಾಪ್ತಿಯ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೇರಸಾ-ಗವ್ವಾಳಿ, ಹೆಮ್ಮಡಗಾ-ತಳೇವಾಡಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ತೀರ್ಥಕುಂಡೆ, ಅಮಟೆ-ತೋರಾಳಿ, ತಿವೋಲಿ-ಶಿರೋಲಿ, ಹೆಮ್ಮಡಗಾ-ದೇಗಾಂವ ಗ್ರಾಮಗಳ ನಡುವೆ ಹರಿಯುವ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಸತತ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಹಳ್ಳಗಳು ತುಂಬಿ ಹರಿಯುತ್ತಿವೆ. ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಮತ್ತು ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಮುಳುಗಿದ ಸ್ಥಿತಿಯಲ್ಲಿ ಮುಂದುವರೆದಿವೆ.
ಕಳೆದೊಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.