ಕನ್ನಡಪ್ರಭ ವಾರ್ತೆ ಕೋಲಾರಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಮಾಣವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನ್ಯಾಯಾಂಗ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಿಷನ್ ವಾತ್ಸಲ್ಯ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಇಲಾಖೆಯ ವಿವಿಧ ಯೋಜನೆಗಳ ಮೊದಲನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
೨೦೨೫-೨೬ನೇ ಸಾಲಿನಲ್ಲಿ ಇದುವರಿಗೆ ದಾಖಲಾಗಿರುವ ಬಾಲ್ಯ ವಿವಾಹಗಳ ಒಟ್ಟು ಪ್ರಕರಣಗಳ ಸಂಖ್ಯೆ ೫೧ ಹಾಗೂ ತಡೆಗಟ್ಟಿರುವ ಪ್ರಕರಣಗಳು ೨೧ ಬಾಕಿ ಉಳಿದಿರುವ ಒಟ್ಟು ೩೦ ಪ್ರಕರಣಗಳನ್ನು ಎಫ್.ಐ.ಆರ್ ದಾಖಲಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶ ಹಾಗೂ ಕೆಲ ಸಮುದಾಯಗಳಿರುವ ಪ್ರದೇಶಗಳಿಗೆ ಹೋಗಿ ಅರಿವು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಏಕವ್ಯಕ್ತಿ ಪೋಷಕರ ಪ್ರಕರಣಗಳನ್ನು ಪತ್ತೆ ಹಚ್ಚಿ ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಕಾರ್ಯನಿರ್ವಹಿಸಿ. ಸರ್ಕಾರಿ ದತ್ತು ಸಂಸ್ಥೆಯು ೦-೬ ವರ್ಷದೊಳಗಿನ ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಸಂಸ್ಥೆಯಾಗಿದೆ. ಇಂತಹ ಮಕ್ಕಳಿಗೆ ಶಾಶ್ವತ ಕುಟುಂಬದ ವ್ಯವಸ್ಥೆ ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಸಂಸ್ಥೆಯು ನೆರವಾಗುತ್ತದೆ ಎಂದು ಹೇಳಿದರು.ಪ್ರತ್ಯೇಕ ಬಾಲ ಮಂದಿರ
ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಕೋವಿಡ್-೧೯ ರಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ ೮ ಮಕ್ಕಳಿಗೆ ಮಾಸಿಕ ೩,೫೦೦ ರೂ.ಗಳ ಆರ್ಥಿಕ ಧನ ಸಹಾಯ ಆರ್‌ಟಿಜಿಎಸ್ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಮಕ್ಕಳ ಮಾಹಿತಿ ಪಿಎಂ ಕೇರ್ ಪೋರ್ಟಲ್‌ನಲ್ಲಿ ಅಳವಡಿಸಲಾಗಿದೆ ಎಂದರು.
ಮಕ್ಕಳ ಸಹಾಯವಾಣಿ ಯಾವುದೇ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಸಹಕಾರಿಯಾಗಿದೆ. ಮಕ್ಕಳ ಸಹಾಯವಾಣಿ-೧೦೯೮ ನ್ನು ಇ.ಆರ್.ಎಸ್.ಎಸ್-೧೧೨ ನೊಂದಿಗೆ ವಿಲೀನಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಅನುಸ್ಥಾನಗೊಳಿಸಿದೆ ಎಂದು ತಿಳಿಸಿದರು. ಯೋಜನೆಗಳ ಪ್ರತಿ ಪರಿಶೀಲನೆ
ಜಿಪಂ ಸಿಇಓ ಪ್ರವೀಣ್ ಬಿ.ಬಾಗೇವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಮತ್ತಿತರರು ಇದ್ದರು.