ಬಳ್ಳಾರಿ: ನೆಲದ ಸಾಂಸ್ಕೃತಿಕ ಸೊಗಡಿಗೆ ಧಕ್ಕೆಯಾದಾಗ ಎಲ್ಲರೂ ಒಗ್ಗೂಡಿ ಧ್ವನಿ ಎತ್ತಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕನ್ನಡದ ಭಾಷೆ, ಸಂಸ್ಕೃತಿ ಮೇಲಿನ ದಾಳಿಗೆ ಪರೋಕ್ಷವಾಗಿ ಹೊರಗಿನ ಕೈಗಳು ಕೆಲಸ ಮಾಡುತ್ತಿವೆ. ಒಂದೇ ಭಾಷೆ, ಒಂದೇ ಸಂಸ್ಕೃತಿ ಹೆಸರಿನಲ್ಲಿ ಪ್ರಾದೇಶಿಕ ವೈವಿಧ್ಯತೆ, ಸಂಸ್ಕೃತಿ ಹಾಗೂ ಅಸ್ಮಿತೆ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಯಾವ ಭಾಷೆಯೂ ಮೇಲಲ್ಲ. ಯಾವ ಭಾಷೆಯೂ ಕೀಳಲ್ಲ. ಸಂವಿಧಾನವು ಎಲ್ಲ ಭಾಷೆಗಳಿಗೆ ಸಮಾನ ಗೌರವ ಕೊಟ್ಟಿದೆ. ನಮ್ಮ ಭಾಷೆಯ ಸೊಗಡನ್ನೇ ಹಾಳು ಮಾಡುವ ಕೃತ್ಯವನ್ನು ಕನ್ನಡಿಗರು ಸಹಿಸಬಾರದು. ಬರೀ ಉತ್ತರ ಭಾರತದ ಇತಿಹಾಸ ಅರ್ಥ ಮಾಡಿಕೊಂಡರೆ ಸಾಲದು. ನಮ್ಮ ನೆಲದ ಇತಿಹಾಸ ಎಷ್ಟು ತಿಳಿದುಕೊಂಡಿದ್ದೇವೆ ಎಂಬುದನ್ನು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಬಹುತ್ವದ ಮೇಲೆ ದಾಳಿ ನಡೆದಾಗ ಕನ್ನಡಿಗರು ಸುಮ್ಮನಿರಬಾರದು ಎಂದು ಹೇಳಿದರು.
ತೆರಿಗೆ ಪಾಲು ನೀಡದ ಕೇಂದ್ರ:ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಸಂದಾಯ ಮಾಡುವುದು ಕರ್ನಾಟಕ. ಆದರೆ, ಕೇಂದ್ರ ಸರ್ಕಾರ ನಮಗೆ ತೆರಿಗೆ ಹಣದಲ್ಲಿ ಸರಿಯಾದ ಪಾಲು ನೀಡುತ್ತಿಲ್ಲ. ಇದರಿಂದ ರಾಜ್ಯದ ಅನೇಕ ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ನೆಲೆಯ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಕನ್ನಡಿಗರಾದ ನಾವು ಇದನ್ನು ಪ್ರಶ್ನಿಸಬೇಕಲ್ಲವೇ ? ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದೇ ವೇಳೆ ಬಳ್ಳಾರಿ ಗಡಿ ಪ್ರದೇಶದ ಭಾಷಾ ವೈವಿಧ್ಯತೆಯನ್ನು ಕುರಿತು ಪ್ರಸ್ತಾಪಿಸಿದ ಸಚಿವ ಕೃಷ್ಣ ಭೈರೇಗೌಡ, ಬಳ್ಳಾರಿ ಜಿಲ್ಲೆ ಕನ್ನಡ-ತೆಲುಗು, ಉರ್ದು ಭಾಷಾ ಸಂಸ್ಕೃತಿಯ ಸಮ್ಮಿಲನವಾಗಿದೆ ಎಂದು ಬಣ್ಣಿಸಿದರು.ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾ ಪ್ರಶಸ್ತಿ:
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬಸವರಾಜ್ ಮಸೂತಿ (ಸಾಹಿತ್ಯ), ಸಿ.ಜಿ.ಹಂಪಣ್ಣ(ಪತ್ರಿಕೋದ್ಯಮ), ಕಣ್ಣೂರು ಹೊನ್ನನಗೌಡ (ಕನ್ನಡಸೇವೆ), ವೈ.ಚಿನ್ನಸ್ವಾಮಿ(ಜಾನಪದ), ಲಕ್ಷ್ಮಿಪವನಕುಮಾರ್ (ಸಂಗೀತ), ವೀಣಾ ಆದೋನಿ (ರಂಗಭೂಮಿ), ಕೆ.ಎಂ.ಬಸವರಾಜಸ್ವಾಮಿ (ಬಯಲಾಟ), ಸುಮಿತ್ರಮ್ಮ ಪರಶುರಾಮ(ಶಿಲ್ಪಕಲೆ) ಹಾಗೂ ಶಿಕ್ಷಣ ಕ್ಷೇತ್ರದ ಮೆಹತಾಬ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶಾಲಾ ಮಕ್ಕಳಿಗಾಗಿ ಆಯೋಜನೆ ಮಾಡಿದ್ದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ಸಚಿವ ಕೃಷ್ಣ ಭೈರೇಗೌಡ ಅವರು ವಿತರಿಸಿದರು. ನಗರ ಶಾಸಕ ನಾರಾ ಭರತ್ ರೆಡ್ಡಿ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ, ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರು, ಎಡಿಸಿ ಮಹಮ್ಮದ್ ಝುಬೇರ್, ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ , ಕರವೇ ಮುಖಂಡ ಚಾನಾಳ್ ಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಯಿತು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಸಾರಿಗೆ ಇಲಾಖೆ) ವತಿಯಿಂದ ವಿಧಾನ ಸೌಧ, ತೋಟಗಾರಿಕೆ ವತಿಯಿಂದ ಪರಿಸರ ಸಂರಕ್ಷಣೆಯ ಗಿಡಗಳು ಪ್ರದರ್ಶಿಸಿದರೆ ಮಹಾನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ನಗರ-ಸ್ವಚ್ಛ ನಗರ ವಿಷಯದೊಂದಿಗೆ ಸ್ತಬ್ಧಚಿತ್ರ ರೂಪಿಸಲಾಗಿತ್ತು.
ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಗಳನ್ನು ಉಳಿಸಿ, ಮಗಳನ್ನು ಬೆಳೆಸಿ ಎನ್ನುವ ಘೋಷ ವಾಕ್ಯದ ಸ್ತಬ್ಧಚಿತ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಘೀ ಹಾಗೂ ಇತರೆ ರೋಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ, ಶಿಕ್ಷಣ ಇಲಾಖೆಯ ಮಕ್ಕಳು ಧರಿಸಿದ್ದ ವಿವಿಧ ಮಹನೀಯರ ವೇಷಭೂಷಣ ಸೇರಿದಂತೆ ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಮೊದಲ ಕನ್ನಡದ ಶಾಸನಗಳಲ್ಲಿ ಒಂದಾದ ಹಲ್ಮಿಡಿ ಶಾಸನದ ಪ್ರತಿರೂಪವನ್ನು ಸಚಿವ ಕೃಷ್ಣ ಭೈರೇಗೌಡ ಅನಾವರಣಗೊಳಿಸಿದರು.
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಕನ್ನಡದ ಕಲರವ ಕಂಡು ಬಂತು. ನಗರದ ಬೀದಿ ಬೀದಿಗಳಲ್ಲಿ ಕನ್ನಡದ ಬಾವುಟಗಳನ್ನು ಕಟ್ಟಿ ಕನ್ನಡಿಗರು ಸಂಭ್ರಮಿಸಿದರು. ಆಟೋ ಚಾಲಕರು, ಬೈಕ್ ಸವಾರರು, ಅಂಗಡಿ ಮುಂಗಟ್ಟುಗಳ ಮಾಲೀಕರು ಕನ್ನಡ ಧ್ವಜಗಳನ್ನು ಕಟ್ಟಿಕೊಂಡು ಭಾಷಾ ಪ್ರೇಮ ಮೆರೆದರು.ನಗರದ ಪ್ರಮುಖ ವೃತ್ತಗಳಲ್ಲಿ ಕನ್ನಡ ಕವಿಗಳ ಭಾವಚಿತ್ರಗಳು ಹಾಗೂ ಕನ್ನಡ ಧ್ವಜಗಳಿಂದ ಅಲಂಕಾರ ಮಾಡಲಾಗಿತ್ತು. ಶಾಲಾ-ಕಾಲೇಜುಗಳು, ವಿವಿಧ ವಾಣಿಜ್ಯ ಸಂಸ್ಥೆಗಳು, ಕನ್ನಡಪರ ಸಂಘಟನೆಗಳ ಕಚೇರಿಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಸಡಗರ ಕಂಡು ಬಂತು.
ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಪಿ.ಗಾದೆಪ್ಪ ಅವರು ಕನ್ನಡ ಗೀತೆಗಳ ನೃತ್ಯ ಪ್ರದರ್ಶನ ಏರ್ಪಡಿಸಿದ್ದರು. ಬೆಳಿಗ್ಗೆ ಧ್ವಜಾರೋಹಣ ಸಮಾರಂಭ ಮುಗಿಯುತ್ತಿದ್ದಂತೆ ಮಧ್ಯಾಹ್ನದವರೆಗೆ ಕನ್ನಡ ಗೀತೆಗಳ ಗಾಯನ ಹಾಗೂ ನೃತ್ಯ ಪ್ರದರ್ಶನ ಜರುಗಿದವು. ಶುಕ್ರವಾರ ಸಂಜೆ ನಗರದ ವಿವಿಧೆಡೆ ಕನ್ನಡಪರ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿವೆ.