ಸಾಗರ: ಪ್ರತಿವರ್ಷ ಜನವರಿ 4ರಂದು ರೈತ ಸಂಘವು ಸಂಭ್ರಮದಿಂದ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಿಕೊಂಡು ಬರುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಅಂದು ಕರಾಳ ದಿನವನ್ನು ಆಚರಿಸುವ ತೀರ್ಮಾನ ಕೈಗೊಂಡಿದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
ಅಂದು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ರೈತರು ಕಪ್ಪುಬಟ್ಟೆ ಧರಿಸಿ ಆಡಳಿತ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ. ಅಹೋರಾತ್ರಿ ನಡೆಯುವ ಪ್ರತಿಭಟನೆ ಸಂದರ್ಭದಲ್ಲಿ ರೈತ ಸಂಘ ಅನೇಕ ಅಹವಾಲುಗಳನ್ನು ಸರ್ಕಾರ, ಸಚಿವರು, ಶಾಸಕರು, ಆಡಳಿತದ ಎದುರು ಇಡಲಿದೆ. ಸಚಿವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಿ ಅದಕ್ಕೆ ಸ್ಥಳದಲ್ಲಿಯೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಉಗ್ರಸ್ವರೂಪಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಬೇರೆಬೇರೆ ಭಾಗದಲ್ಲಿ ಸಾಮಾಜಿಕ ಬಹಿಷ್ಕಾರ ದೊಡ್ಡ ಪಿಡುಗಾಗಿದೆ. ಸಾಮಾಜಿಕ ಬಹಿಷ್ಕಾರ ನೀಡುವ ಮೂಲಕ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಆಧುನಿಕ ಅಸ್ಪೃಶ್ಯತೆಯೂ ಆಗಿದೆ. ಕುಟುಂಬಕ್ಕೆ ಬಹಿಷ್ಕಾರ ಹಾಕಿ ₹50 ಸಾವಿರವರೆಗೂ ದಂಡ ಪಡೆಯಲಾಗುತ್ತಿದೆ. ದಂಡ ಕಟ್ಟದೇ ಇದ್ದಲ್ಲಿ ಬೇರೆ ಬೇರೆ ರೀತಿಯಲ್ಲಿ ಹಿಂಸೆ ನೀಡಲಾಗುತ್ತಿದೆ. ತಕ್ಷಣ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಸಾಮಾಜಿಕ ಬಹಿಷ್ಕಾರವನ್ನು ಬೇರುಸಹಿತ ಕಿತ್ತೊಗೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಹೊಯ್ಸಳ ಗಣಪತಿಯಪ್ಪ, ಡಾ. ರಾಮಚಂದ್ರಪ್ಪ ಮನೆಘಟ್ಟ, ಚಂದ್ರು ಎಸ್., ವಿ.ಟಿ. ರಾಮಚಂದ್ರ ಸೂರನಗದ್ದೆ, ಸಂತೋಷ್, ಚಂದ್ರಪ್ಪ ಆಲಳ್ಳಿ ಹಾಜರಿದ್ದರು.