- ಕಳೆಗಟ್ಟಿದ ದಸರಾ । ರಾಜಬೀದಿ ಉತ್ಸವ, ಧಾರ್ಮಿಕ, ಸಾಂಸ್ಕೃತಿಕ ವೈಭವ । ಬುಧವಾರ ಚಾಮುಂಡಿಯಲಂಕಾರ, ಗಜಾಶ್ವಪೂಜೆ, ಮಹಾನವಮಿ.
ಶೃಂಗೇರಿಯಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರುಗು ಪಡೆದುಕೊಳ್ಳುತ್ತಿದ್ದು ಧಾರ್ಮಿಕ, ಸಾಂಸ್ಕೃತಿಕ ಕಲರವ ಕಳೆಗಟ್ಟಿದೆ. ನವರಾತ್ರಿ ಆರಂಭದಿಂದಲೂ ಮಳೆರಾಯ ಶೃಂಗೇರಿ ಬಿಟ್ಟು ಕದಲದಿದ್ದರೂ ದೇಶದ ನಾನಾ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತಲೆ ಇದೆ. ಶ್ರೀ ಶಾರದಾಂಬಾ ದೇವಾಲಯ, ಶ್ರೀ ಶ್ರೀಮಠದ ಆವರಣ, ನರಸಿಂಹವನ,ಬೋಜನಾ ಶಾಲೆ, ಶೃಂಗೇರಿ ಪಟ್ಟಣ ಹೀಗೆ ಎಲ್ಲೆಂದರಲ್ಲಿ ಜನಜಂಗುಳಿಯೇ ಹಬ್ಬಕ್ಕೆ ಕಳೆತಂದಿದೆ.
ನವರಾತ್ರಿಯ 9 ನೇ ದಿನವಾದ ಮಂಗಳವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಕಾಮೇಶ್ವರನ ಪ್ರಾಣಕಾಂತೆಯಾಗಿ ಪುಷ್ಪ ಬಾಣ ಹಿಡಿದು ಪಾಶ ,ಅಂಕುಶ, ಚಾಪದಾರಿಣಿಯಾಗಿ ಕರುಮಣಾಪೂರಿತ ದೃಷ್ಠಿಯುಳ್ಳವಳಾಗಿ ಸರ್ವಾಲಂಕಾರ ಭೂಷಿತಳಾಗಿ ಕಂಗೊಳಿಸುತ್ತಿದ್ದ ಶಾರದೆ ಅಲಂಕಾರ ಭಕ್ತರ ಮನಸೂರೆ ಗೊಳಿಸುವಂತೆ ನಯನ ಮನೋಹರವಾಗಿತ್ತು.ಕರುಣಾಮೂರ್ತಿ, ಪಂಚಬ್ರಹ್ಮಸ್ವರೂಪಿಣಿ, ಕೈವಲ್ಯ ಪ್ರದಾಯಿನಿ, ಕ್ಷಿಪ್ರ ಪ್ರಸಾದಿನಿ ಆದ ರಾಜರಾಜೇಶ್ವರಿ ಸರ್ಪಶುಭಕಾರಿಣಿ ಯಾಗಿದ್ದಾಳೆ. ಪುರಾಣೇತಿಹಾಸಗಳ ಸಂಗಮ ಸ್ಥಳವಾದ ಶೃಂಗೇರಿ ಪರಶಿವನು ಸಂಚರಿಸಿದ ಸ್ಥಳ.ಆತ ಸತತ ನೆಲೆನಿಂತ ಬೆಟ್ಟದಲ್ಲಿ ಮಲಹಾನಿಕರೇಶ್ವರ ಮಂದಿರವಿದೆ. ಮಹರ್ಷಿ ವಿಭಾಂಡಕರು ತಪಸನ್ನಾಚರಿಸಿ ಲೋಕಕಲ್ಯಾಣ ಮಾಡಿ ಶಿವೈಕ್ಯರಾದ ಪುಣ್ಯಸ್ಥಳವಿದು.
ಶ್ರೀ ಶಾರದಾಂಬಾ ದೇವಾಲಯದ ಪ್ರಾಂಗಣದಲ್ಲಿ ಸ್ವರ್ಣರಥದಲ್ಲಿ ಶ್ರೀ ಶಾರದಾಂಬೆ ಮೂರ್ತಿಯನ್ನಿಟ್ಟು ಮೂರುಸುತ್ತು ಪ್ರದಕ್ಷಿಣೆ ಬರಲಾಯಿತು. ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿದ ನಂತರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಶಾರದಾಂಬೆಗೆ ಅಭಿಮುಖ ವಾಗಿರುವ ಸ್ವರ್ಣ ಸಿಂಹಾಸನದಲ್ಲಿ ಆಸೀನರಾಗಿ ನವರಾತ್ರಿ ದರ್ಬಾರ್ ನಡೆಸಿದರು.
ಬುಧವಾರ ಶಾರದೆಗೆ ಚಾಮುಂಡಿ ಅಲಂಕಾರ ನಡೆಯಲಿದೆ. ಜಗದ್ಗುರುಗಳು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ಶ್ರೀ ಮಠದ ಯಾಗಶಾಲೆಯಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಶತಚಂಡೀಯಾಗದ ಪೂರ್ಣಾಹುತಿ ನೆರವೇರಲಿದೆ. ಮಹಾನವಮಿ, ಗಜಾಶ್ವಪೂಜೆಗಳು ನೆರವೇರಲಿದೆ. ರಾಜಬೀದಿ ಉತ್ಸವದಲ್ಲಿ ಕೆರೆ ಪಂಚಾಯಿತಿ ವ್ಯಾಪ್ತಿ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ,ಕಲಾ ತಂಡಗಳು ಪಾಲ್ಗೊಳ್ಳಲಿದೆ. ನವರಾತ್ರಿ ಕೊನೆ ದಿನದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಬೆಂಗಳೂರಿನ ವಿದ್ವಾನ್ ಮಧುಸೂದನ್ ಭಾಗವತರ್ ತಂಡದ ಹಾಡುಗಾರಿಕೆ ಇದೆ.
30 ಶ್ರೀ ಚಿತ್ರ 1