ಬಂಟ್ವಾಳ: ಸಮಾಜದ ಎಲ್ಲ ಸ್ತರದ ಜನರು ದಿವ್ಯಾಂಗರ ಸೇವೆಯಲ್ಲಿ ಪಾಲ್ಗೊಳ್ಳುವುದು ಇಂದಿನ ಅಗತ್ಯ. ದಿವ್ಯಾಂಗ ಮಕ್ಕಳಿಗೆ ಮಾಡುವ ಸೇವೆ ಶ್ರೇಷ್ಠವಾದುದು ಎಂದು ಸಹಕಾರ ರತ್ನ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಹೇಳಿದ್ದಾರೆ.
ಮುಖ್ಯ ಅತಿಥಿಯಾಗಿ ಎಚ್.ಪಿ. ಇಂಡಿಯಾ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಶನ್ ಮುಖ್ಯಸ್ಥ ದಿಲೀಪ್ ಚಂದ್ರ ಮಾತನಾಡಿ, ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆ ಮಾಡುತ್ತಿರುವ ದಿವ್ಯಾಂಗರ ಸೇವೆಯಲ್ಲಿ ಎಚ್ ಪಿ ಸಂಸ್ಥೆ ಸದಾ ಸಹಭಾಗಿಯಾಗಲಿದೆ ಎಂದು ಹೇಳಿದರು.
ಎಚ್ ಪಿ ಸಂಸ್ಥೆಯ ಇಂಕ್ಲೂಸಿವ್ ಆಂಡ್ ಬಿಲಾಂಗಿಂಗ್ ಯೋಜನೆಯಡಿ ವಿಕಾಸಂನಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಶಿಕ್ಷಣದ ಉದ್ದೇಶದಿಂದ ಕಂಪ್ಯೂಟರ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.ಹೋಟೆಲ್ ವಿವಾಂತ, ಮಂಗಳೂರು ಇಲ್ಲಿನ ಮಾನವ ಸಂಪನ್ಮೂಲ ಮುಖ್ಯಸ್ಥರಾದ ರೇಖಾ ಸಂಜೀವ್ ಮಾತನಾಡಿ, ಖಾಸಗಿ ವಲಯದ ಉದ್ಯೋಗದಾತರೂ ದಿವ್ಯಾಂಗರಿಗೆ ಉದ್ಯೋಗವನ್ನು ಒದಗಿಸಬೇಕು ಎಂದು ಹೇಳಿದರು.
ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕ ಧರ್ಮಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕ ಗೋಪಾಲ್ ಗೋವಿಂತೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇನ್ನೊಬ್ಬ ಸಹ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಅತಿಥಿಗಳನ್ನು ಸ್ವಾಗತಿಸಿದರು. ನವ್ಯಾ ನಿರೂಪಿಸಿದರು. ಈ ಸಂದರ್ಭ ವಿಕಾಸಂ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜರುಗಿತು.