ನಾನು ಸೋತಿದ್ದೇನೆ ಹೊರತು ಸತ್ತಿಲ್ಲ, ಖೂಬಾಗೆ ರಾಜಶೇಖರ ಟಾಂಗ್‌

KannadaprabhaNewsNetwork | Published : Oct 3, 2023 6:00 PM

ಸಾರಾಂಶ

ಸೂರ್ಯಕಾಂತ ಟಿಕೆಟ್‌ ಕೈತಪ್ಪಲು ಭಗವಂತ ಖೂಬಾ ಕಾರಣ, ಖೂಬಾ ವಿರುದ್ಧ ಬಿಜೆಪಿ ಶಾಸಕರ ದಂಡೇ ಇದೆ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಕಿಡಿ ನುಡಿ
ಸೂರ್ಯಕಾಂತ ಟಿಕೆಟ್‌ ಕೈತಪ್ಪಲು ಭಗವಂತ ಖೂಬಾ ಕಾರಣ । ಖೂಬಾ ವಿರುದ್ಧ ಬಿಜೆಪಿ ಶಾಸಕರ ದಂಡೇ ಇದೆ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಕಿಡಿ ನುಡಿ ಬೀದರ್‌: ನನ್ನದು ಆಕ್ಸಿಡೆಂಟಲ್‌ ಸೋಲು. ಅಷ್ಟಕ್ಕೂ ನಾನು ಸೋತಿದ್ದೇನೆ ಹೊರತು ಸತ್ತಿಲ್ಲ ಹುಮನಾಬಾದ್‌ ಪಾಟೀಲ್‌ ಕುಟುಂಬ ಒಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಪಾಟೀಲ್‌ ಕುಟುಂಬದ ಕುರಿತಂತೆ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ, ಸೂರ್ಯಕಾಂತ ನಾಗಮಾರಪಳ್ಳಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸಿದ್ದೆ ಭಗವಂತ ಖೂಬಾ ಎಂದು ಆರೋಪಿಸಿದರು. ಈ ಹಿಂದೆ ಕೆಡಿಪಿ ಸಭೆಗಳಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದ ಖೂಬಾ ಅವರಿಗೆ ಇದೀಗ ನಾಗಮಾರಪಳ್ಳಿ ಪರಿವಾರದ ಮೇಲೆ ಪ್ರೀತಿ ಹುಟ್ಟಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭ ಅವರ ಬೆಂಬಲ ಪಡೆಯುವ ಹುನ್ನಾರ ಇದ್ದರೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ನಾಗಮಾರಪಳ್ಳಿ ಕುಟುಂಬದ ಬಗ್ಗೆ ಪ್ರೀತಿ ತೋರಿಸುತ್ತಿರುವ ಖೂಬಾ ವರ್ತನೆ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿ ಹೋಗಿತ್ತು. ಅದೇನೇ ಇರಲಿ ಪ್ರೀತಿ ಮಾಡಿದರೆ ಪೂರ್ಣ ಪ್ರಮಾಣದಲ್ಲಿ ಅರ್ಧಕ್ಕೆ ಕೈ ಕೊಡುವದು ಬೇಡ ಎಂದು ಮಾತಿನ ಚಾಟಿ ಬೀಸಿದರು. ಈ ಹಿಂದೆ ನಾಗಮಾರಪಳ್ಳಿ ಕುಟುಂಬಕ್ಕೆ ನಾವೂ ಸಹಕಾರ ಮಾಡಿದ್ದೇವೆ, ಅವರೂ ನಮಗೆ ಮಾಡಿದ್ದಾರೆ. ಇದು ಚುನಾವಣೆ ಇಲ್ಲಿ ಬೀಗರು, ನೆಂಟರು ಎಂಬುವದಿಲ್ಲ. ಇನ್ನು ಪಾಟೀಲ್‌ ಕುಟುಂಬವನ್ನು ಒಡೆಯುವದು ಯಾರಿಂದಲೂ ಸಾಧ್ಯವಿಲ್ಲ. ನನ್ನ ಸಹಮತ, ಸಮ್ಮುಖದಲ್ಲಿಯೇ ಭೀಮರಾವ್‌ ಪಾಟೀಲ್‌ಗೆ ವಿಧಾನಪರಿಷತ್‌ ಟಿಕೆಟ್‌ ಕೊಡಲಾಗಿದೆ. ನಾನೂ ಸಚಿವನಾಗಿದ್ದವ ನನಗೆ ಗೊತ್ತಿಲ್ಲದೆ ಟಿಕೆಟ್‌ ಕೊಡಲಾಗುತ್ತದೆಯೇ ಎಂದು ಪ್ರಶ್ನಿಸಿದರು. ರಾವಣನೂ ಸೋತಿದ್ದಾನೆ: ನಾನೇ ದೊಡ್ಡವ ಎಂದು ಹೇಳುತ್ತಿದ್ದ ರಾವಣನೂ ಸೋತಿದ್ದಾನೆ ಎಂಬುವದನ್ನು ನೆನಪಿಸಿಕೊಳ್ಳಲಿ. ಅಷ್ಟಕ್ಕೂ ಈಗ ಖೂಬಾ ಜೊತೆಯಲ್ಲಿ ಹುಮನಾಬಾದ್‌ ಬಿಜೆಪಿ ಶಾಸಕ ಬಿಟ್ರೆ ಈ ಲೋಕಸಭಾ ಕ್ಷೇತ್ರದ ಬೇರ್ಯಾವ ಶಾಸಕರೂ ಇಲ್ಲ. ಈಗಾಗಲೇ ಔರಾದ್‌ನ ಪ್ರಭು ಚವ್ಹಾಣ್‌, ಬಸವಕಲ್ಯಾಣ ಶರಣು ಸಲಗರ, ಬೀದರ್‌ ದಕ್ಷಿಣದ ಡಾ. ಶೈಲೇಂದ್ರ ಬೆಲ್ದಾಳೆ ಏನೇನು ಮಾತನಾಡಿದ್ದಾರೆ ಎಂಬುವದನ್ನು ಅರಿತುಕೊಳ್ಳಿ ಎಂದು ಖೂಬಾಗೆ ಟಾಂಗ್‌ ನೀಡಿದರು. ಗ್ರಾಪಂ ಸದಸ್ಯನಾಗಲೂ ಅರ್ಹತೆ ಇಲ್ಲದ ಖೂಬಾ ಜನವರಿಯಲ್ಲಿ ಬಿಜೆಪಿ ಸರ್ಕಾರ ಬರುತ್ತೆ ಎಂದು ಹೇಳುತ್ತಿರುವದು ಹಾಸ್ಯಾಸ್ಪದ. ಬಿಎಸ್‌ಎಸ್‌ಕೆ ಕಾರ್ಖಾನೆಯ ಚಕ್ಕಡಿ, ಗಾಲಿ. ಯಂತ್ರೋಪಕರಣಗಳೆಲ್ಲವೂ ಮಾರಾಟ ಮಾಡಲಾಗಿದೆ ಅಲ್ಲಿ ಏನೂ ಇಲ್ಲ ಈ ಕುರಿತಂತೆ ತನಿಖೆಗೆ ಆದೇಶಿಸುವಂತೆ ಸಚಿವರಿಗೆ ಆಗ್ರಹಿಸಿದ್ದೇನೆ ಎಂದು ರಾಜಶೇಖರ ಪಾಟೀಲ್‌ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌, ವೀರಣ್ಣ ಪಾಟೀಲ್‌, ಅಬಿಷೇಕ ಪಾಟೀಲ್‌, ವೈಜನಾಥ ಯನಗುಂದೆ ಹಾಗೂ ದತ್ತಾತ್ರೆಯ ಮೂಲಗೆ ಇದ್ದರು.

Share this article