ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟ 10 ದಿನ ಪೂರೈಸಿದ್ದು, 10ನೇ ದಿನದ ಪ್ರತಿಭಟನೆಗೆ ಚನ್ನಪಟ್ಟಣದ ರಾಜಸ್ಥಾನ ಸಂಘ ಹಾಗೂ ಜೈನ ಸಮುದಾಯದ ಮುಖಂಡರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿದರು
ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟ 10 ದಿನ ಪೂರೈಸಿದ್ದು, 10ನೇ ದಿನದ ಪ್ರತಿಭಟನೆಗೆ ಚನ್ನಪಟ್ಟಣದ ರಾಜಸ್ಥಾನ ಸಂಘ ಹಾಗೂ ಜೈನ ಸಮುದಾಯದ ಮುಖಂಡರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿದರು. ಈ ವೇಳೆ ಸಮಾಜ ಸೇವಕ ಸುಮತಿಕುಮಾರ್ ಜೈನ್ ಮಾತನಾಡಿ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ತಮಿಳುನಾಡಿನ ರಾಜಕಾರಣಿಗಳು ರಾಜಕಾರಣವನ್ನು ಚುನಾವಣೆಗಳಿಗೆ ಸೀಮಿತ ಮಾಡಿಕೊಂಡು ನೆಲ, ಜಲ, ಭಾಷೆಯ ವಿಚಾರದಲ್ಲಿ ಒಟ್ಟಾಗಿ ನಿಲ್ಲುತ್ತಿದ್ದರೆ, ನಮ್ಮಲ್ಲಿ ಅಧಿಕಾರದ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಈ ಯೋಜನೆಯಿಂದ ಹೆಚ್ಚು ಮಳೆ ಬಂದಾಗ ಸಮುದ್ರಕ್ಕೆ ಹರಿಯುವ ನೀರನ್ನು ಶೇಖರಿಸಬಹುದು. ಮಳೆ ಬಾರದ ಸಂಕಷ್ಟದ ಸಂದರ್ಭದಲ್ಲಿ ನೀರನ್ನು ಬಳಸಬಹುದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಮೇಕೆದಾಟು ಯೋಜನೆ ಮಾಡುವ ನಿರ್ಣಯ ಮಾಡಬೇಕು. ಅಲ್ಲಿಯವರೆಗೆ ನಾವು ಸತತ ಹೋರಾಟ ಮಾಡೋಣ ಎಂದರು. ಸಮುದಾಯದ ಮುಖಂಡ ಬಾಬುಲಾಲ್ ಕೊಠಾರಿ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ರಾಜ್ಯಕ್ಕೆ ಸಂಬಧಿಸಿದ ವಿಚಾರಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿ ಮಾಡುವುದನ್ನು ಮುಂದಿಟ್ಟು ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡದಿರುವುದು ಸರಿಯಲ್ಲ ಎಂದು ಖಂಡಿಸಿದರು. ಕೆ.ಕೆ. ಎಲೆಕ್ಟ್ರಿಕಲ್ಸ್‌ನ ಕಿಸ್ತೂರ್ ಚಂದ್ ಮಾತನಾಡಿ, ನಮಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಬೇರೆ ದೇಶಗಳ ನಡುವಿನ ಸಮಸ್ಯೆ ಬಗೆಹರಿಸಲು ಗಮನ ನೀಡುವಂತೆ ನಮ್ಮ ರಾಜ್ಯಗಳ ಸಮಸ್ಯೆ ಪರಿಹರಿಸಲು ಗಮನ ನೀಡಬೇಕು. ಕಾವೇರಿ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸಂಕಷ್ಟ ಸೂತ್ರ ರಚಿಸಬೇಕು. ಮೇಕೆದಾಟು ಯೋಜನೆಯಿಂದ ಬರಿ ನಮಗೆ ಮಾತ್ರ ಲಾಭವಾಗುವುದಿಲ್ಲ, ನೀರು ಸಂಗ್ರಹವಾದರೇ ತಮಿಳುನಾಡಿಗೂ ಹರಿಸಬಹುದು. ಹಾಗಾಗಿ ಈ ಯೋಜನೆಗೆ ತಮಿಳುನಾಡು ಸಹ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಚಿಕ್ಕೇನಹಳ್ಳಿ ಸುಧಾಕರ್, ಸಿದ್ದಪ್ಪಾಜಿ, ಮುಖಂಡರಾದ ರಾಜು ಗುಲೇಚಾ, ಕಮಲ್ ಸಿಂಗ್, ಸಂತೋಷ್ ಜಾದವ್, ವಿಕಾಸ್ ಜಾದವ್, ಲಕ್ಷ್ಮಣ್ ಜೀ, ಅಜಯ್ ಬ್ಯಾಂಕರ್, ಬಾಬು, ಶಾಂತಿ ಲಾಲ್ ಬೋಲೆರಾಮ್, ಸುಮಿತ್ ಕುಮಾರ್, ಜಯ್ ಚಂದ್ , ಅನಿಲ್ ಕುಮಾರ್, ಪದಮ್ ಭುವೋತ್ ಇದ್ದರು. ಪೊಟೋ೧೪ಸಿಪಿಟ೧: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟದ 10ನೇ ದಿನದ ಪ್ರತಿಭಟನೆಯಲ್ಲಿ ಚನ್ನಪಟ್ಟಣದ ರಾಜಸ್ಥಾನ ಸಂಘ ಬೆಂಬಲಿಸಿ ಪಾಲ್ಗೊಂಡಿತ್ತು.