ಕನ್ನಡಪ್ರಭ ವಾರ್ತೆ ಬನ್ನೂರು ಮಾರಾಟ ಮಾಡುವಂತ ಆಹಾರ ಪದಾರ್ಥಗಳು ಆರೋಗ್ಯಕರವಾಗಿರಬೇಕೆ ಹೊರತು, ತಿನ್ನುವವರಿಗೆ ಮಾರಕವಾಗಿರಬಾರದು ಎಂದು ಟಿ. ನರಸೀಪುರ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಜಿ.ಎಸ್. ಸುಮಂತ್ ಹೇಳಿದರು.ಪಟ್ಟಣದ ಸಂತೆಮಾಳದಲ್ಲಿರುವ ರಾಜಸ್ತಾನಿ ಜಿಲೇಬಿ ಅಂಗಡಿಗೆ ಗುರುವಾರ ಭೇಟಿ ನೀಡಿ, ತಯಾರಾಗಿರುವಂತ ಜಿಲೇಬಿ ತಯಾರಿಕೆಗೆ ಸಿದ್ದ ಪಡಿಸಲಾಗಿದ್ದ ಎಲ್ಲ ಸಿದ್ದ ಪದಾರ್ಥವನ್ನು ಪರೀಕ್ಷೆ ನಡೆಸಿ ನಂತರ ಮಾಲೀಕರನ್ನು ಕುರಿತು ಅವರು ಮಾತನಾಡಿದರು.ರಸ್ತೆ ಬದಿಯಲ್ಲಿ ತಯಾರಾಗುವಂತ ಆಹಾರ ಪದಾರ್ಥಗಳು, ಸಾರ್ವಜನಿಕರನ್ನು ಆಕರ್ಷಣೆ ಮಾಡಲು ವಿವಿಧ ರೀತಿಯ ಕಳಪೆ ಗುಣಮಟ್ಟದ ಬಣ್ಣ ಸೇರಿದಂತೆ, ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಕೆ ಮಾಡಿ ನೀಡಿ ಸಾರ್ವಜನಿಕ ಆನಾರೋಗ್ಯಕ್ಕೆ ಕಾರಣವಾಗುತ್ತಿದ್ದಾರೆ. ರಸ್ತೆ ಬದಿಯಲ್ಲಿ ಕೈಗೆಟಕುವಂತ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗುವುದರಿಂದ ಶಾಲಾ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ತಿನ್ನುವ ಮೂಲಕ, ತಮಗರಿವಿಲ್ಲದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.ಇಲ್ಲಿ ಮಾಡಲಾಗಿರುವಂತ ಈ ಜಿಲೇಬಿಯಲ್ಲಿ ಹಾಕಲಾಗಿರುವಂತ ಬಣ್ಣ, ತಯಾರಿಕೆಯಲ್ಲಿ ಬಳಸಲಾಗಿರುವ ಎಣ್ಣೆ, ಸಕ್ಕರೆ ಪಾಕದ ಗುಣಮಟ್ಟ ಕಡಿಮೆ ಇರುವಂತೆ ಕಂಡು ಬಂದಿದ್ದು, ಇದರ ಮಾದರಿಯನ್ನು ಸಂಗ್ರಹಿಸಿ ನೋಟಿಸ್ ನೀಡಲಾಗಿದೆ. ಕೂಡಲೇ ಇದನ್ನು ಪ್ರಯೋಗಲಾಯಕ್ಕೆ ರವಾನಿಸಿ ಫಲಿತಾಂಶ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು. ಬೀದಿಬದಿಯಲ್ಲಿ ಆಹಾರ ಪದಾರ್ಥ ಮಾರುವವರು ಉತ್ತಮ ಪದಾರ್ಥ ಬಳಕೆ ಮಾಡಿ, ಆಹಾರ ತಯಾರಿಸುವಂತೆ ತಿಳಿಸಿದರು. ಗುರುವಾರ ಪಟ್ಟಣದಲ್ಲಿ 7 ವಿವಿಧ ಆಹಾರ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ ಮೂರು ಮಾದರಿಯನ್ನು ಕಾನೂನಾತ್ಮವಾಗಿ ನಿರ್ವಹಿಸಿದರೆ, 4 ಮಾದರಿಯನ್ನು ಸರ್ವೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಆಹಾರ ಕಲಬೆರಕೆ ವಿರುದ್ದವಾಗಿ ಕಟ್ಟುನಿಟ್ಟಿನ ಕ್ರಮ ಜರುಗಲಿದೆ ಎಂದು ತಿಳಿಸಿದರು. ಎಲ್ಲ ಉದ್ದಿಮೆದಾರರು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತೆ ತರಬೇತಿ ಹಾಗೂ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.