ಹುಬ್ಬಳ್ಳಿ: ಬಡವರು, ಯುವಕರು ಹಾಗೂ ಶ್ರಮಿಕ ವರ್ಗದವರಿಗೆ ನಾನಾ ರೀತಿಯಲ್ಲಿ ಸಹಾಯ ನೀಡುವ ಪದ್ಧತಿಯನ್ನು ಈ ವರ್ಷವೂ ಮುಂದುವರಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಫೆ. 14ರಂದು ಮೂರನೇ ವರ್ಷದ ‘ರಜತ್ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ 32ನೇ ಜನ್ಮದಿನ ಅಂಗವಾಗಿ ಸಹಾಯ ವ್ಯವಸ್ಥೆಯನ್ನು ಮುಂದುವರಿಸುತ್ತಿದ್ದೇವೆ. ಸಾಂಕೇತಿಕವಾಗಿ ಫೆ. 14ರಂದು ಸಂಜೆ 5.30ಕ್ಕೆ ಗಿರಣಿ ಚಾಳದಲ್ಲಿ ವಿಶೇಷ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು,ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ವಿಮಲ ರೇಣುಕಾ ವೀರಮುಕ್ತಿಮನಿ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅದೇ ರೀತಿ ಧಾರವಾಡ ಜಿಲ್ಲೆಯ ಐವತ್ತು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹಾಸ್ಯ ದಿಗ್ಗಜ ಗಂಗಾವತಿ ಪ್ರಾಣೇಶ ನೇತೃತ್ವದ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ ಎಂದ ಅವರು, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗೇರಿಯ ರಾಷ್ಟ್ರಧ್ವಜ ತಯಾರಕರನ್ನು ಸನ್ಮಾನಿಸಲಾಗುತ್ತದೆ. ಯುವಕರಿಂದ ಸಾಹಸ ಮಲ್ಲಕಂಬ ಪ್ರದರ್ಶನ ನಡೆಯುವುದು. ಚಲನಚಿತ್ರ ನಟ ಡಾಲಿ ಧನಂಜಯ ಪಾಲ್ಗೊಳ್ಳುವರು ಎಂದರು.ಇದಲ್ಲದೇ ಸಚಿವರಾದ ಸಂತೋಷ್ ಲಾಡ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಶಾಸಕ ಎನ್. ಎಚ್. ಕೋನರೆಡ್ಡಿ ಸೇರಿದಂತೆ ಪ್ರಮುಖ ನಾಯಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಟಿಕೆಟ್ ಆಕಾಂಕ್ಷಿಧಾರವಾಡ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಟಿಕೆಟ್ ಸಿಗುವ ವಿಶ್ವಾಸವಿದೆ. ಸಿಗದಿದ್ದರೂ ಪಕ್ಷದ ಯಾವುದೇ ಕಾರ್ಯಕರ್ತನಿಗೆ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ. ಪಕ್ಷದ ಪರ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಸಂಘಟಿತಗೊಳಿಸುವ ಕೆಲಸ ನಡೆದಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ತೃಪ್ತಿ ಹೊಂದಿದ್ದು, ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ರಜತ್ ಹೇಳಿದರು.
ಪಾಲಿಕೆ ಸದಸ್ಯರಾದ ಶಿವಕುಮಾರ ರಾಯನಗೌಡ, ಚೇತನ್ ಹಿರೇಕೆರೂರು, ಮುಖಂಡರಾದ ಮೋಹನ ಹಿರೇಮನಿ, ಶಹಜಮಾನ್ ಮುಜಾಹಿದ್, ಸಾದಿಕ್ ಯಕ್ಕುಂಡಿ ಸುದ್ದಿಗೋಷ್ಠಿಯಲ್ಲಿದ್ದರು.