ಜೀವನವನ್ನೇ ಸಮಾಜಕ್ಕೆ ಮುಡಿಪಾಗಿಟ್ಟಿದ್ದ ರಾಜುಗೌಡರು

KannadaprabhaNewsNetwork | Published : Mar 26, 2025 1:37 AM

ಸಾರಾಂಶ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿ ಮಾಜಿ ಸಚಿವ ದಿ.ಜಿ ರಾಜುಗೌಡರ 21ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಸಾಲೂರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಪ್ರಜಾಪ್ರಭುತ್ವದ ಆಶಯದಂತೆ ಜನರಿಂದ ಜನರಿಗೋಸ್ಕರ ಎಂದು ತಮ್ಮ ಜೀವನವನ್ನೇ ಕ್ಷೇತ್ರದ ಜನರಿಗಾಗಿ ಮುಡಿಪಾಗಿಟ್ಟವರು ಮಾಜಿ ಸಚಿವ ದಿ.ರಾಜುಗೌಡರವರು, ಅವರ ರಾಜಕೀಯ ಹಾದಿಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಮುನ್ನಡೆಯುತ್ತಿದ್ದಾರೆ ಎಂದು ಸಾಲೂರು ಬ್ರಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿ ಮಾಜಿ ಸಚಿವ ದಿ.ಜಿ ರಾಜುಗೌಡರ 21ನೇ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ತಮ್ಮ ಸ್ವಗ್ರಾಮದಲ್ಲಿ 3 ಎಕರೆ ಜಮೀನು ನೀಡುವುದರ ಮೂಲಕ ಪ್ರೌಢಶಾಲೆ ತೆರೆದು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ ಕ್ಷೇತ್ರದಲ್ಲೆಡೆ ಪ್ರಾಥಮಿಕ, ಪ್ರೌಢಶಾಲೆ ಕಾಲೇಜುಗಳನ್ನು ತೆರೆಯುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

ಮಲೆಮಹದೇಶ್ವರ ಬೆಟ್ಟಕ್ಕೆ ದಿ.ರಾಜುಗೌಡರು ಹಾಗೂ ಮಾಜಿ ಶಾಸಕ ನರೇಂದ್ರ ಅವರು ಹಲವಾರು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಮಲೆಮಹದೇಶ್ವರ ಬೆಟ್ಟಕ್ಕೆ ಕಾವೇರಿ ನೀರು ಕೊಡುವುದರ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಇದೇ ರೀತಿ ಕ್ಷೇತ್ರದಲ್ಲಿ ಇವರ ಕುಟುಂಬದವರು ಹಲವಾರು ಶಾಶ್ವತ ಯೋಜನೆಗಳನ್ನು ಮಾಡಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂಎಸ್ಐಎಲ್ ಅಧ್ಯಕ್ಷ, ಚಾ.ನಗರ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ರಾಜುಗೌಡರ ಶಿಷ್ಯರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಅವರು ನೇರ ನುಡಿ ನಿಷ್ಠುರವಾದಿಯಾಗಿದ್ದರು, ಸೇವಾ ಮನೋಭಾವ ಹೊಂದಿದವರಾಗಿದ್ದರು. ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾಡಳಿತ ಭವನ ನಿರ್ಮಾಣದಲ್ಲಿ ಅವರ ಪರಿಶ್ರಮವಿದೆ ಎಂದು ರಾಜುಗೌಡರ ಜೊತೆಗಿನ ಒಡನಾಟದ ದಿನಗಳ ನೆನಪು ಮಾಡಿಕೊಂಡರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಆರೋಗ್ಯವೇ ಭಾಗ್ಯ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಸದೃಢ ದೇಹ ಮತ್ತು ಸದೃಢ ದೇಶ ನಿರ್ಮಾಣಕ್ಕಾಗಿ ಆರೋಗ್ಯ ಬಹಳ ಮುಖ್ಯ, ಇಂತಹ ಮಹಾನ್ ಕಾರ್ಯಕ್ಕೆ ರಾಜುಗೌಡರ ಸ್ಮರಣೆ ಸಾಕ್ಷಿಯಾಗಿರುವುದು ಸಂತಸದ ವಿಚಾರವಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗಾಗಿ ಅನುದಾನದ ಕೊರತೆ ಉಂಟಾದಾಗ ಜಿಲ್ಲೆಯ ಎಲ್ಲಾ ಶಾಸಕರಿಂದಲೂ ಶಾಸಕರ ಅನುದಾನ ನೀಡುವಂತೆ ಎಲ್ಲಾ ಶಾಸಕರಿಗೆ ಆದೇಶಿಸಿದರು. ಅದರಂತೆ ನಾವೆಲ್ಲರೂ ಸಹ ಜಿಲ್ಲಾ ಕ್ರೀಡಾಂಗಣಕ್ಕೆ ಶಾಸಕರ ಅನುದಾನವನ್ನು ನೀಡಿದ್ದೆವು. ಅವರ ಹಾದಿಯಲ್ಲಿ ನರೇಂದ್ರ ರಾಜುಗೌಡರು ಸಾಗುತ್ತಿದ್ದಾರೆ. ದುರದೃಷ್ಟಾವಸಾತ್ ಈ ಅವಧಿಯಲ್ಲಿ ಅವರಿಗೆ ಗೆಲುವು ಸಿಗಲಿಲ್ಲ. ಈ ಭಾಗದ ಪಕ್ಷ ಸಂಘಟನೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಆರ್.ನರೇಂದ್ರರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ಕೊಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಗೋಪಾಲ್ ಗೌಡ ಆಸ್ಪತ್ರೆಯ ನರರೋಗ ತಜ್ಞ ಡಾ.ಶುಶ್ರುತ್ ಮಾತನಾಡಿ, ಮಾಜಿ ಶಾಸಕ ಆರ್.ನರೇಂದ್ರ ಅವರ ತಂದೆಯವರ ಹೆಸರಿನಲ್ಲಿ ಮಾಡುವ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ತಿಮ್ಮಯ್ಯ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಪಪಂ ಸದಸ್ಯರಾದ ಗಿರೀಶ್, ಹರೀಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮದುವನಹಳ್ಳಿ ಶಿವಕುಮಾರ್, ಮುಖಂಡರಾದ ಹೊನ್ನೇಗೌಡ, ಕೊಪ್ಪಳಿ ಮಹಾದೇವ ನಾಯಕ , ಲಿಂಗರಾಜು, ಮಾದೇವ , ರಾಮಲಿಂಗಣ್ಣ,ಮಾದೇಶ್, ಎಲ್ ನಾಗೇಂದ್ರ, ಅರುಣ್,ವಕೀಲರಾದ ನಾಗರಾಜು, ಸಿದ್ದಲಿಂಗೇಗೌಡ, ಮಂಗಲ ಪುಟ್ಟರಾಜು, ತೆಳ್ಳನೂರು ಪ್ರದೀಪ್ ಕುಮಾರ್, ಚೇತನ್ ದೊರೆರಾಜು, ಗುಂಡಾಪುರ ಮಾದೇಶ್, ದೊಡ್ಡಿಂದುವಾಡಿ ಗ್ರಾಮಸ್ಥರು ಇನ್ನಿತರರು ಹಾಜರಿದ್ದರು.

ತಂದೆ ನೆನಪಿನಲ್ಲಿ ಸಮಾಜಮುಖಿ ಕಾರ್ಯ: ನರೇಂದ್ರ

ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕಳೆದ 21 ವರ್ಷಗಳಿಂದಲೂ ನಮ್ಮ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ದಿ.ಜಿ ರಾಜುಗೌಡ ಚಾರಿಟೇಬಲ್ ಟ್ರಸ್ಟ್ ತೆರೆದು ಟ್ರಸ್ಟ್ ಮೂಲಕ ಉಚಿತ ಆರೋಗ್ಯ ಶಿಬಿರ ಹಾಗೂ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ತಿಳಿಸಿದರು. ಮಾಜಿ ಶಾಸಕ ಆರ್‌ ನರೇಂದ್ರರ ಪತ್ನಿ ಆಶಾ ನರೇಂದ್ರ, ಪುತ್ರ ನವನೀತ್ ಗೌಡ, ಪುತ್ರಿ ನಿಖಿತಾ ಗೌಡ, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ , ಹೊನ್ನೇಗೌಡ ನಾಗರಾಜು ಹಾಗೂ ನೂರಾರು ಅಭಿಮಾನಿಗಳು ಸಮಾಧಿ ಜಾಗಕ್ಕೆ ಬಂದು ಪೂಜೆ ಸಲ್ಲಿಸಿದರು.

Share this article