ನಮ್ಮ ಭಾಷೆ, ಮೂಲ ಕಳೆದುಕೊಳ್ಳಬಾರದು

KannadaprabhaNewsNetwork | Published : Sep 15, 2024 1:52 AM

ಸಾರಾಂಶ

ಕನ್ನಡ ವಿಶ್ವಕೋಶ–10 ಮತ್ತು 13ನೇ ಸಂಪುಟಗಳ ಪರಿಷ್ಕೃತ ಆವೃತ್ತಿ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಮೂಲವನ್ನು, ನಮ್ಮ ಭಾಷೆ ಕಳೆದುಕೊಳ್ಳಬಾರದು ಎಂದು ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ತಿಳಿಸಿದರು.

ನಗರದ ಕ್ರಾಫರ್ಡ್ ಭವನದಲ್ಲಿ ಶನಿವಾರ ಮೈಸೂರು ವಿಶ್ವವಿದ್ಯಾಲಯದ ‘ಕನ್ನಡ ವಿಶ್ವಕೋಶ–10 ಮತ್ತು 13ನೇ ಸಂಪುಟ’ಗಳ (ಪರಿಷ್ಕೃತ ಆವೃತ್ತಿ) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವೃದ್ಧಾಪ್ಯದಲ್ಲಿ ಎಲ್ಲರಿಗೂ ಮೂಲ ನೆನಪಾಗುತ್ತದೆ. ಆದ್ದರಿಂದ ನಾವು ನಮ್ಮ ಭಾಷೆ ಮತ್ತು ಮೂಲವನ್ನು ಕಳೆದುಕೊಳ್ಳಬಾರದು. ಉದ್ಯೋಗ, ವಿಜ್ಞಾನ, ತಂತ್ರಜ್ಞಾನಕ್ಕೆ ಇಂಗ್ಲಿಷ್ಬೇಕು. ಆದರೆ ನಾವು ನಮ್ಮ ಮಾತೃಭಾಷೆ ಬಿಡಬಾರದು. ಮಹಿಳೆಯರು ಕನ್ನಡ ವಿಶ್ವಕೋಶದಂತ ಪುಸ್ತಕ ಓದಬೇಕು. ಮಕ್ಕಳಿಗೂ ಓದಿಸುವುದು ನಮ್ಮ ಕರ್ತವ್ಯ ಎಂದು ತಿಳಿಯಬೇಕು. ಪ್ರತಿ ಮನೆಯಲ್ಲಿಯೂ ಕನ್ನಡ ವಿಶ್ವಕೋಶ ಇರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಶುದ್ಧ ಬಳಕೆ ಇಲ್ಲ: ಈಗ ಶುದ್ಧ ಕನ್ನಡದ ಬಳಕೆಯೇ ಇಲ್ಲದಂತಾಗಿದೆ. ಇದನ್ನು ನೋಡಿದಾಗ ಬಹಳ ನೋವಾಗುತ್ತದೆ. ಜಗತ್ತಿನಲ್ಲಿ ನಾನು ಎಲ್ಲೇ ಹೋದರೂ ನಾನು ಕನ್ನಡಿಗಳೆ. ಹಲವು ಭಾಷೆ ಗೊತ್ತಿದ್ದರೂ ಕನ್ನಡವೇ ನನ್ನ ತಾಯಿ. ನನಗೆ 19 ವರ್ಷ ವಯಸ್ಸಾದಾಗ ತಾಯಿ ಕನ್ನಡ ವಿಶ್ವಕೋಶವನ್ನು ಕೊಡುಗೆಯಾಗಿ ನೀಡಿದರು. ಇಂದರಿಂದಲೇ ನನ್ನ ಬೇರುಗಳು ಆಳವಾಗಿ ಕನ್ನಡದ್ದೇ ಆಗಿವೆ ಎಂದರು.

ಶ್ರೇಷ್ಠ ಗುಣವನ್ನು ನಾವು ಕಳೆದುಕೊಳ್ಳಬಾರದು. ಸಾಹಿತ್ಯ ಮೊದಲಾದವನ್ನು ಓದುವ ಮೂಲಕ ಜ್ಞಾನ ಸಂಗ್ರಹಿಸುವ ಪರಂಪರೆ ಕನ್ನಡಿಗರದ್ದು. ಶ್ರೇಷ್ಠವಾದದ್ದನ್ನು ಮುಂದಿನ ತಲೆಮಾರಿಗೂ ದಾಟಿಸಬೇಕು ಎಂದು ಅವರು ಸಲಹೆ ನೀಡಿದರು.

ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಅಹಂಕಾರದಿಂದಲೇ ನಾವು ಜೀವನವನ್ನು ಬಹಳ ಕಷ್ಟ ಮಾಡಿಕೊಳ್ಳುತ್ತೇವೆ. ಬಂದಿದ್ದನ್ನು ಸ್ವೀಕರಿಸಬೇಕು. ನಾನು ಬಡವರಿಂದ ಕಲಿತಿದ್ದೇನೆಯೇ ಹೊರತು ಶ್ರೀಮಂತರಿಂದಲ್ಲ ಎಂದರು.

ಏಕೆಂದರೆ 3 ಸಾವಿರ ಲೈಂಗಿಕ ಕಾರ್ಯಕರ್ತೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕವಾಗಿ ನೆರವಾಗಲು 3 ಕೋಟಿಗೆ ಜಾಮೀನು ಕೊಟ್ಟಿದ್ದೆ. ಆ ಮೂರು ಸಾವಿರ ಹೆಣ್ಣು ಮಕ್ಕಳೂ ನನಗೆ ಮೋಸ ಮಾಡಲಿಲ್ಲ. ಕೆಲವು ಶ್ರೀಮಂತರು ಮೋಸ ಮಾಡಿದ್ದಾಗಿ ಅವರು ಹೇಳಿದರು.

ಮಾತು ತಪ್ಪಬಾರದು:

ಆಡಳಿತ ನಡೆಸುವವರು ಮಾತು ತಪ್ಪಬಾರದು. ಪಾರದರ್ಶಕತೆ ಮುಖ್ಯ. ಆಗ ಮಾರ್ಯದೆ ಇರುತ್ತದೆ. ತಪ್ಪಾದಾಗ ಅದನ್ನು ಮರೆಮಾಚದೆ ಒಪ್ಪಿಕೊಳ್ಳಬೇಕು. ನನಗೆ ಓದುವ ಆಸೆ ಬಿಟ್ಟರೆ ಬೇರೇನೂ ಇಲ್ಲ. ನಾನು ಹಿಂದಿನಿಂದಲೂ ಹಣಕ್ಕೆ ಆದ್ಯತೆ ನೀಡಿದವಳಲ್ಲ. ತೃಪ್ತಿ ಹಾಗೂ ಶಾಂತಿಯಿಂದ ಇರುವುದರಿಂದ ಸದಾ ಹಸನ್ಮುಖಿ ಆಗಿರುತ್ತೇನೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ, ಪ್ರಸರಾಂಗ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು ಮೊದಲಾದವರು ಇದ್ದರು.

-- ಬಾಕ್ಸ್‌---- ಕೌಶಲ್ಯವೂ ಅಗತ್ಯ-- ಈಗಿನ ದಿನಗಳಲ್ಲಿ ಪದವಿ ಇದ್ದರೆ ಸಾಲದು ಕೌಶಲ್ಯವೂ ಇರಬೇಕು. ಆಗ ಉದ್ಯೋಗ ದೊರಕುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಮುಂದೆ ಬರಬಹುದು. ಬೇರೆಯವರ ಜತೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟರೆ ಮಾನಸಿಕ ಒತ್ತಡ ನಿವಾರಣೆ ಆಗುತ್ತದೆ. ನಮ್ಮ ಪೈಪೋಟಿ ನಮ್ಮೊಂದಿಗಷ್ಟೆ ಇರಬೇಕು. ಸ್ವಸ್ಥ, ಶಾಂತ ಹಾಗೂ ವ್ಯವಸ್ಥಿತ ಸಮಾಜಕ್ಕೆ ಮದುವೆ ಅಗತ್ಯ. ಆದರೆ, ಅದಕ್ಕಾಗಿ ಅನಗತ್ಯ ಖರ್ಚು ಬೇಡ ಎಂದರು.ಕೃತಕ ಬುದ್ಧಿಮತ್ತೆ ಹಾಗೂ ರೊಬೊಟ್ ಆತಂಕ ಉಂಟು ಮಾಡಿದೆ ನಿಜ. ಕಂಪ್ಯೂಟರ್ ಬಂದಾಗಲೂ ಅದೇ ಆತಂಕವಿತ್ತು. ಆದರೆ, ಅದರಿಂದ ಉದ್ಯೋಗ ಸೃಷ್ಟಿಯಾಯಿತೇ ಹೊರತು ತೊಂದರೆಯಾಗಲಿಲ್ಲ. ಎಐ ಬಗ್ಗೆಯೂ ಚರ್ಚೆಯಾಗುತ್ತಿದೆ ನೋಡೋಣ. ಏನೇ ತಂತ್ರಜ್ಞಾನ ಬಂದರೂ ನಿರ್ವಹಿಸಲು ಬುದ್ಧಿವಂತ ಮನುಷ್ಯ ಬೇಕೆಬೇಕು ಎಂದು ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ತಿಳಿಸಿದರು.

Share this article