ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಿಮ್ಸ್ ಸಭಾಂಗಣದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನ್ನಡ ಕಾರ್ಯಕಾರಿ ಸಮಿತಿ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲರವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ಮಾತನಾಡಿ, ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ನೆಲ, ಜಲದ ಬಗ್ಗೆಯೂ ಗೌರವ ಭಾವನೆ ರೂಢಿಸಿಳ್ಳಬೇಕಿದೆ. ಎರಡೂವರೆ ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಹೃದಯದ ಭಾಷೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಆಂಗ್ಲಭಾಷೆ ವ್ಯಾಮೋಹದಿಂದ ಇಂದಿನ ಮಕ್ಕಳು ಕನ್ನಡದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಭಾಷೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿಯನ್ನು ಬೆಳೆಸಬೇಕು. ನಮ್ಮ ಭಾಷೆಯ ಮಹತ್ವವನ್ನು ಅವರಿಗೆ ತಿಳಿಸಿಕೊಡಬೇಕಿದೆ. ಜ್ಞಾನಕ್ಕಾಗಿ ಎಷ್ಟು ಭಾಷೆ ಕಲಿತರೂ ತಪ್ಪಿಲ್ಲ. ಆದರೆ, ಮಾತೃಭಾಷೆಯನ್ನು ಕಡೆಗಣಿಸಬಾರದು ಎಂದು ಸಲಹೆ ನೀಡಿದರು.ಸರ್ಕಾರದ ಪ್ರತಿ ಹಂತದ ಆಡಳಿತ ಕನ್ನಡದಲ್ಲಿರಬೇಕು. ನ್ಯಾಯಾಲಯದ ಪ್ರತಿಯೊಂದು ತೀರ್ಪು ಕನ್ನಡದಲ್ಲಿ ಹೊರಬರಬೇಕು. ಭಾಷೆಯನ್ನು ಬಳಸಿದಂತೆಲ್ಲಾ ಬೆಳೆಯುತ್ತಾ ಹೋಗುತ್ತದೆ. ಎಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಬಳಸುವುದರೊಂದಿಗೆ ಭಾಷೆ ಔನ್ಯತ್ಯಕ್ಕೇರುವಂತೆ ಮಾಡಬೇಕು ಎಂದರು.
ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲೆಲ್ಲಾ ಕನ್ನಡ ಬಳಕೆ ಹೆಚ್ಚಾಗಬೇಕು. ನಮ್ಮಲ್ಲಿರುವ ಒಳ್ಳೆಯ ವಿಚಾರಗಳು, ಸಾಹಿತ್ಯ ಎಲ್ಲವೂ ಬೇರೆ ಭಾಷೆಗಳಿಗೆ ಭಾಷಾಂತರಗೊಂಡಂತೆ ಬೇರೆ ದೇಶದ ಉತ್ತಮ ವಿಷಯಗಳು ಕನ್ನಡಕ್ಕೂ ತರ್ಜುಮೆಯಾಗುವ ವಾತಾವರಣ ಸೃಷ್ಟಿಯಾಗಬೇಕು. ಇದರಿಂದಲೂ ಭಾಷೆ ಬೆಳವಣಿಗೆ ಕಾಣಲಿದೆ ಎಂದರು.ಕಾರ್ಯಕ್ರಮದಲ್ಲಿ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುರ್ಮಾ, ಸ್ವಾನೀಯ ವೈದ್ಯಾಧಿಕಾರಿ ಡಾ.ಡಿ.ಬಿ.ದರ್ಶನ್‌ಕುಮಾರ್, ಶುಶ್ರೂಷಕ ಪ್ರಾಂಶುಪಾಲ ಎಲ್.ಎಲ್.ಕ್ಲೆಮೆಂಟ್, ಪ್ರಭಾರ ಶುಶ್ರೂಷಕ ಅಧೀಕ್ಷಕಿ ಸಿ.ಎಂ.ರೇಣು ಮತ್ತು ಕನ್ನಡ ಸಂಘದ ಕಾರ್ಯಾಕಾರಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.
ನ.೧೨ರಂದು ಶೈಕ್ಷಣಿಕ ಸಮ್ಮೇಳನಕನ್ನಡಪ್ರಭ ವಾರ್ತೆ ಮಂಡ್ಯ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆಯಿಂದ ನ.೧೨ರಂದು ಬೆಳಗ್ಗೆ ೯.೩೦ ಗಂಟೆಗೆ ಶೈಕ್ಷಣಿಕ ಸಮ್ಮೇಳನ ಮತ್ತು ನೂತನ ಮಾದರಿ ಪ್ರಶ್ನೆಪತ್ರಿಕೆ, ನೀಲನಕ್ಷೇ ಅನ್ವಯಿಕತೆ ಕಾರ್ಯಾಗಾರ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚಲುವಯ್ಯ ನೆರವೇರಿಸುವರು. ಪರಿಸರ ಕಾಳಜಿ ಕೇವಲ ಪಠ್ಯವಲ್ಲ: ಬದುಕಿನ ಒಂದು ಭಾಗ ವಿಷಯ ಕುರಿತು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾಧ್ಯಕ್ಷ ಲೋಕೇಶ್ ಬೆಕ್ಕಳಲೆ ವಹಿಸುವರು. ಪ್ರಾಸ್ತಾವಿಕ ನುಡಿಯನ್ನು ವೇದಿಕೆಯ ಗೌರವ ಸಲಹೆಗಾರ ಡಾ.ವೈ.ಕೃಷ್ಣಪ್ಪ ನುಡಿಯುವರು. ಸಿ.ಗೌರಮ್ಮ ಉಪಸ್ಥಿತರಿರುವರು.ಮಧ್ಯಾಹ್ನ ೨ ಗಂಟೆಯಿಂದ ೪ ಗಂಟೆಯವರೆಗೆ ನೂತನ ಮಾದರಿ ಪ್ರಶ್ನೆಪತ್ರಿಕೆ ಮತ್ತು ನೀಲನಕ್ಷೆ ಅನ್ವಯಿಕತೆ ಕುರಿತು ಕನ್ನಡ ಉಪನ್ಯಾಸಕ ಡಾ.ಎಸ್.ನರಸಿಂಹಸ್ವಾಮಿ ಉಪನ್ಯಾಸ ನೀಡುವರು. ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸುವರು. ಶಾಲಾ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆಂಪೇಗೌಡ ಪ್ರತಿಭಾ ಪುರಸ್ಕಾರ ನೀಡುವರು. ವೇದಿಕೆಯ ಕಾರ್ಯಾಧ್ಯಕ್ಷೆ ಕೆ.ಟಿ.ಪುಷ್ಪಲತಾ, ಉಪಾಧ್ಯಕ್ಷರಾದ ವಿನೋದ್‌ಸಿಂಗ್, ಪ್ರತಿಮಾರಾಣಿ, ಪ್ರಧಾನ ಕಾರ್ಯದರ್ಶಿ ಆರ್.ರವೀಂದ್ರ, ಡಿ.ಪಿ.ವೆಂಕಟೇಗೌಡ, ಬಿ.ಬಿ.ಸಿದ್ದರಾಜು ಭಾಗವಹಿಸುವರು.