ಕನ್ನಡಪ್ರಭ ವಾರ್ತೆ ಯಾದಗಿರಿ
ಡಾ. ಹೊನ್ಕಲ್ (66 ವರ್ಷ) ಶಹಾಪುರ ತಾಲೂಕಿನ ಸಗರದವರು. ತಂದೆ ಶರಣಬಸಪ್ಪ ಹೊನ್ಕಲ್, ತಾಯಿ ಶಿವಕಾಂತಮ್ಮ. ಎಂ.ಎ (ಕನ್ನಡ), ಎಲ್.ಎಲ್.ಬಿ., ಆರೋಗ್ಯ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ಡಿಪ್ಲೊಮಾ ಇಂದಿರಾಗಾಂಧಿ ವಿವಿ ದೆಹಲಿ, ಹಾಗೂ ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ ಮೈಸೂರಿನಲ್ಲಿ ಪದವಿ. ವಿಭಾಗೀಯ ಆರೋಗ್ಯ ತರಬೇತಿ ಕೇಂದ್ರ ಕಲಬುರ್ಗಿಯಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತರು.
ಕತೆ, ಕವನ, ಗಜಲ್, ಹೈಕು, ಶಾಯಿರಿ, ಲಲಿತ ಪ್ರಬಂಧ, ಜೀವನ ಕಥನ, ಹಾಗೂ ಕನ್ನಡದಲ್ಲಿ ಅತಿಹೆಚ್ಚು ಪ್ರವಾಸ ಕಥನಗಳನ್ನು ಬರೆದವರು ಎಂಬ ಹೆಗ್ಗಳಿಕೆ ಹೊಂದಿ, ವಿವಿಧ ಪ್ರಕಾರದ ಸುಮಾರು 80 ಕಿಂತ ಹೆಚ್ಚು ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ಆಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.ಅವರ ಸಾಹಿತ್ಯ ಸೇವೆ ಪರಿಗಣಿಸಿ ಭಾರತದಲ್ಲಿ ಇರುವ ಏಕೈಕ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು ಅವರಿಗೆ 2024ರಲ್ಲಿ ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿ ರಾಜ್ಯಪಾಲರು ಹಾಗೂ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕತೆಗಳಿಗೆ ಗುಲ್ಬರ್ಗಾ ವಿವಿಯ ಚಿನ್ನದ ಪದಕ, ಪ್ರವಾಸ ಕಥನ ಕೃತಿಗಳಿಗೆ ಮೂರು ಬಾರಿ ಗುಲ್ಬರ್ಗ ವಿವಿಯ ರಾಜ್ಯೋತ್ಸವ ಪುರಸ್ಕಾರ, ಕೇಂದ್ರ ಕಸಾಪ ದತ್ತಿ ಪುರಸ್ಕಾರ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳ 65 ಕ್ಕೂ ಹೆಚ್ಚು ಪುರಸ್ಕಾರಗಳು ಇವರ ಪ್ರಕಟಿತ ಕೃತಿಗಳಿಗೆ ಸಂದಿವೆ.
*ಪ್ರಮುಖ ಪ್ರಶಸ್ತಿಗಳ ವಿವರ: ಕರ್ನಾಟಕ ಸಾಹಿತ್ಯ ಅಕಾಡೆಮಿ (1996), ಗುಲ್ಬರ್ಗಾ ವಿವಿ ಚಿನ್ನದ ಪದಕ, ರಾಜ್ಯೋತ್ಸವ ಪ್ರಶಸ್ತಿ (2002, 2006), ವಿಶ್ವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕೇಂದ್ರ ಕಸಾಪ ದತ್ತಿ ಪುರಸ್ಕಾರ (2024), ರಾಷ್ಟ್ರಕವಿ ಕುವೆಂಪು ಪುರಸ್ಕಾರ 2023, ರಾಷ್ಟ್ರೀಯ ಬಸವ ಪುರಸ್ಕಾರ, ಸಾಹಿತ್ಯ ಭೂಷಣ, ಕರ್ನಾಟಕ ಸಾಹಿತ್ಯ ರತ್ನ, ಕಥಾ ಸಂಕಲನ: ಕತೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿಧಾನ, ನೆಲದ ನಿಲುವು. ಡಾ.ಹೊನ್ಕಲ್ಗೆ ಸಿಕ್ಕ ಪ್ರಶಸ್ತಿಗಳು.
ಡಾ. ಹೊನ್ಕಲ್ರ ಕೃತಿಗಳು ವಿವಿಗಳಲ್ಲಿ ಪಠ್ಯ: ಕಥೆ, ಲಲಿತ ಪ್ರಬಂಧ, ಪ್ರವಾಸ ಕಥನಗಳು, ಗಜಲ್ ಗಳು ಸೇರಿದಂತೆ ಹದಿನಾರಕ್ಕಿಂತ ಹೆಚ್ಚು ಬರಹಗಳು, ಕೃತಿಗಳು ನಾಡಿನ ಹಾಗೂ ಹೊರನಾಡಿನ ಸೇರಿದಂತೆ ಒಂಬತ್ತು ವಿವಿಗಳಲ್ಲಿ ಪಠ್ಯವಾಗಿ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ರಾಷ್ಟ್ರೀಯ, ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ರಾಜ್ಯದಾದ್ಯಂತ, ದೇಶದಾದ್ಯಂತ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡನೆ, ಕಾವ್ಯವಾಚನ, ಅಧ್ಯಕ್ಷತೆ, ಮುಖ್ಯ ಅತಿಥಿಯಾಗಿ, ಉದ್ಘಾಟಕರಾಗಿ, ಕೃತಿ ಲೋಕಾರ್ಪಣೆ, ಕೃತಿ ಪರಿಚಯ ಸೇರಿದಂತೆ ಜನಾನುರಾಗಿ ವಾಗ್ಮಿಯಾಗಿ ಹೆಸರು ಮಾಡಿದ್ದಾರೆ. ನಾಡಿನ ಬಹುತೇಕ ಪತ್ರಿಕೆಗಳು, ಆಕಾಶವಾಣಿ, ದೂರದರ್ಶನಗಳ ಮೂಲಕ ಇವರ ನೂರಾರು ಬರಹಗಳು ಪ್ರಕಟಗೊಂಡಿವೆ ಮತ್ತು ಪ್ರಸಾರಗೊಂಡಿವೆ.
ನನ್ನನ್ನು ಯಾದಗಿರಿ ಜಿಲ್ಲೆಯ ಮೂಲಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಂಸ್ಕೃತಿ ಮಂತ್ರಿಗಳಿಗೂ, ಕರ್ನಾಟಕ ಸರ್ಕಾರಕ್ಕೆ ಹಾಗೂ ಆಯ್ಕೆ ಸಮಿತಿಯ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಅಭಿನಂದನೆಗಳು. ಇದು ನನಗೆ ಸಂದ ಗೌರವ ಅಲ್ಲ. ನಮ್ಮ ಕಲ್ಯಾಣ ಕರ್ನಾಟಕದ ಸಾಹಿತ್ಯ ಲೋಕಕ್ಕೆ ಹಾಗೂ ಗಿರಿ ನಾಡು ಜಿಲ್ಲೆಯ ಎಲ್ಲ ಸಾಹಿತ್ಯ ಪ್ರೇಮಿಗಳಿಗೆ ದೊರೆತ ಗೌರವ. ಇದಕ್ಕೆ ಕಾರಣರಾದ ಎಲ್ಲರಿಗೂ ಅನಂತ ಕೃತಜ್ಞತೆಗಳು ಎಂದು 2026ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸಿದ್ಧರಾಮ ಹೊನ್ಕಲ್ ಹೇಳಿದರು.