6000 ಚಿತ್ರ ವಿತರಿಸಿದ ಬಾಬಜೀಗೆ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Oct 31, 2026, 02:00 AM IST
ಕೆ. ವೆಂಕಟರಮಣ ಬಾಬಜೀ | Kannada Prabha

ಸಾರಾಂಶ

ಸಿನಿಮಾ ವಿತರಣೆ ಮೂಲಕವೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹಿರಿಯ ಸಿನಿಮಾ ವಿತರಕ ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀಪದ್ಮಾ ಚಿತ್ರಮಂದಿರದ ಮಾಲೀಕ ಕೆ. ವೆಂಕಟರಮಣ ಬಾಬಜೀ ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಹುಬ್ಬಳ್ಳಿ:

ಸಿನಿಮಾ ವಿತರಣೆ ಮೂಲಕವೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹಿರಿಯ ಸಿನಿಮಾ ವಿತರಕ ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀಪದ್ಮಾ ಚಿತ್ರಮಂದಿರದ ಮಾಲೀಕ ಕೆ. ವೆಂಕಟರಮಣ ಬಾಬಜೀ ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಗೆ ಭಾಜನರಾದ ಬಾಬಜಿ ವೆಂಕಟರಮಣ 1947ರಲ್ಲಿ ಗದಗ ಜಿಲ್ಲೆಯಲ್ಲಿ ಜನಿಸಿದ್ದು, ಬಿಕಾಂ ಪದವಿ ಪಡೆದ ನಂತರದಲ್ಲಿ ಅವರ ತಂದೆ ಕೆ.ವಿ. ರಾಜು ಅವರ ಮಾರ್ಗದರ್ಶನದಲ್ಲಿ ಸಿನಿಮಾ ವಿತರಕರಾಗಿ 1964ರಲ್ಲಿ ಚಿತ್ರರಂಗ ಪ್ರವೇಶ ಮಾಡಿದರು.

ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿರುವ ಅವರು, 1982ರಲ್ಲಿ ಇಲ್ಲಿನ ಮೂರುಸಾವಿರ ಮಠದ ಬಳಿ ಶ್ರೀಪದ್ಮಾ ಚಿತ್ರಮಂದಿರ ಸ್ಥಾಪಿಸಿದರು. ಈ ಚಿತ್ರಮಂದಿರವನ್ನು `ಅಜಿತ'''''''' ಚಿತ್ರದೊಂದಿಗೆ ಹಿರಿಯ ನಟ ಅಂಬರೀಶ, ಜಯಮಾಲಾ, ದ್ವಾರಕೀಶ, ರವಿಚಂದ್ರನ್‌, ಕೆಸಿಎನ್‌ ಗೌಡ, ಕೆಸಿಎನ್‌ ಚಂದ್ರಶೇಖರ, ಎನ್‌. ವೀರಸ್ವಾಮಿ ನೇತೃತ್ವದಲ್ಲಿ ಉದ್ಘಾಟನೆ ಮಾಡಿಸಿದ್ದರು. ಈ ಭಾಗದಲ್ಲಿ ಕನ್ನಡ, ಹಿಂದಿ, ತೆಲಗು, ತಮಿಳು ಸಿನೆಮಾ ವಿತರಕರಾಗಿಯೂ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ವಿಶೇಷ ಎಂದರೆ, ಈ ವರೆಗೂ ಅವರ ಸಂಸ್ಥೆಯಿಂದ ಡಾ. ರಾಜಕುಮಾರ ಅವರ ಅತೀ ಹೆಚ್ಚು ಚಿತ್ರಗಳು ಬಿಡುಗಡೆ ಮಾಡಿದ ಕೀರ್ತಿ ಮತ್ತು ಸಂಸ್ಥೆಯಿಂದ ಒಟ್ಟು 6 ಸಾವಿರಕ್ಕೂ ಹೆಚ್ಚು ಚಿತ್ರಗಳ ವಿತರಣೆ ಮಾಡಿದ ಹೆಮ್ಮೆ ಕೂಡ ಇದೆ. ಇದಷ್ಟೇ ಅಲ್ಲದೇ, ಉತ್ತಮ ನಿರ್ಮಾಪಕರಿಗೆ ಪ್ರೋತ್ಸಾಹ ನೀಡಿ ಅವರಿಗೆ ಹಣಕಾಸು ನೆರವು ನೀಡುವ ಮೂಲಕ ವ್ಯಾಪಾರಕ್ಕೆ ಉತ್ತೇಜನ ಕೂಡ ನೀಡಲಾಗಿದೆ. ಸಂಸ್ಥೆಯಿಂದ ಸ್ಕೂಲ್‌ ಮಾಸ್ಟರ್‌, ಜಗ ಮೆಚ್ಚಿದ ಮಗ, ಜಗನ್ಮೋಹಿನಿ, ಸಂತ ತುಕಾರಾಮ, ಭಕ್ತ ಪುರಂದರದಾಸ, ಸತ್ಯಹರಿಶ್ಚಂದ್ರ, ಶ್ರೀನಿವಾಸ ಕಲ್ಯಾಣ, ರತ್ನಗಿರಿ ರಹಸ್ಯ, ಕಿತ್ತೂರ ಚೆನ್ನಮ್ಮ, ಹಳ್ಳಿ ಮೇಷ್ಟ್ರು, ಶಾಂತಿ ಕ್ರಾಂತಿ ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದ ಶ್ರೇಯಸ್ಸು ಸಂಸ್ಥೆಗಿದೆ. ಈಗಾಗಲೇ ಚಿತ್ರರಂಗ ಸೇವೆಯನ್ನು ಗುರುತಿಸಿ ವೆಂಟಕರಮಣ ಅವರಿಗೆ 2016ರಲ್ಲಿ ಬಿ. ಜಯಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೆಂಟಕರಮಣ ಅವರ ತಂದೆ ಕೆ.ವಿ. ರಾಜು ಮೂಲತಃ ಆಂಧ್ರ ಪ್ರದೇಶದವರು. 1935ರಿಂದ ಆಂಧ್ರದಿಂದ ತೆಲಗು ಸಿನೆಮಾ ಪ್ರಚಾರ, ವಿತರಣೆಗೆ ಸೊಲ್ಲಾಪುರ, ಮಿರಜ್‌, ಬಾಂಬೈಗೆ ಅವರು ಬರುತ್ತಿದ್ದರು. ನಂತರದಲ್ಲಿ 1942ರಲ್ಲಿ ಅವರು ಶ್ರೀನಿವಾಸ ಪಿಚ್ಚರ್‌ ಸಂಸ್ಥೆ ಸ್ಥಾಪಿಸಿ ಕನ್ನಡ, ಹಿಂದಿ, ತೆಲಗು ಸಿನೆಮಾವನ್ನು ಮಹಾರಾಷ್ಟ್ರ, ಮುಂಬೈ, ಸಾಂಗ್ಲಿ, ಮಿರಜ್‌ ಸೇರಿದಂತೆ ಎಲ್ಲೆಡೆ ವಿತರಕರಾಗಿ ಕಾರ್ಯನಿರ್ವಹಿಸಿದರು. ಇದರ ಪರಿಣಾಮದಿಂದ ಉತ್ತರ ಕರ್ನಾಟಕದಿಂದ ಕನ್ನಡ ಚಿತ್ರರಂಗ ಉತ್ತುಂಗಕ್ಕೇರಿದೆ. ಅಂದಿನಿಂದಲೂ ಇವರ ಇಡೀ ಕುಟುಂಬ ಸಿನೆಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಸದ್ಯ ನಗರದಲ್ಲಿನ ಶ್ರೀ ಪದ್ಮಾ ಚಿತ್ರಮಂದಿರ ತೆರವುಗೊಳಿಸಿ ಮಾಲ್‌ ಆಗಿ ನಿರ್ಮಿಸಿದ್ದು, ಇಲ್ಲಿಯೂ ಕೂಡ ಮೂರು ಥೇಟರ್‌ ಸ್ಥಾಪಿಸಲು ಮುಂದಾಗಿದ್ದಾರೆ.

ತಂದೆ-ತಾಯಿ ಆಶೀರ್ವಾದ, ತಿರುಪತಿ ತಿಮ್ಮಪ್ಪ ಹಾಗೂ ಶ್ರೀಪದ್ಮಾದೇವಿ ಆಶೀರ್ವಾದದ ಫಲವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸಿನೆಮಾ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ಮೂಡಿಸಿದೆ. ಕೆ. ವೆಂಕಟರಮಣ ಬಾಬಜೀ, ರಾಜ್ಯೋತ್ಸವ ಪ್ರಶಸ್ತಿ ಘೋಷಿತ ಸಿನಿಮಾ ವಿತರಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ