ಆಯ್ಕೆ ಸಮಿತಿ ಕಡೆಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಆಕ್ಷೇಪ

KannadaprabhaNewsNetwork | Updated : Oct 31 2023, 01:17 AM IST

ಸಾರಾಂಶ

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಕ್ಷೇಪಿಸಿದ್ದಾರೆ.

ಕಾರವಾರ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಕ್ಷೇಪಿಸಿದ್ದಾರೆ.

ಪ್ರಶಸ್ತಿಯ ಆಯ್ಕೆ ಸಮಿತಿಯ ಎಲ್ಲ ಸದಸ್ಯರನ್ನೂ ಕತ್ತಲಲ್ಲಿಟ್ಟು, ಒಂದು ದಿನ ಮುಂಚಿತವಾಗಿಯೇ ಅಧಿಕಾರಿಗಳು ತಮ್ಮ ಕಾರ್ಯಾಲಯದಲ್ಲಿ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಗೊತ್ತಾಗಿದೆ. ಇದು ಇಡೀ ಆಯ್ಕೆ ಸಮಿತಿಗೆ ಮಾಡಿದ ಅವಮಾನವಾಗಿದೆ.

ಪ್ರಾದೇಶಿಕ ಅಸಮಾನತೆ: ಪ್ರಕಟವಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಯಾದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಯಲ್ಪಟ್ಟಿದ್ದು, ಈ ಆಯ್ಕೆ ಪಟ್ಟಿಯಲ್ಲಿ ಪ್ರಾದೇಶಿಕ ಅಸಮಾನತೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದ್ದು, ಘಟ್ಟದ ಮೇಲಿನ ತಾಲೂಕುಗಳನ್ನು ಕಡೆಗಣಿಸಲಾಗಿದೆ. ಸಾರ್ವಜನಿಕ ಕ್ಷೇತ್ರದ 17 ಪ್ರಶಸ್ತಿಗಳಲ್ಲಿ ಕರಾವಳಿ ತಾಲೂಕಿನ ಒಂದೇ ತಾಲೂಕಿಗೆ ಐದು ಪ್ರಶಸ್ತಿಗಳು ಬಂದಿವೆ. ಮತ್ತೆರಡು ಕರಾವಳಿ ತಾಲೂಕಿಗೆ ತಲಾ ನಾಲ್ಕು ಪ್ರಶಸ್ತಿಗಳು ಬಂದಿದೆ. ದಾಂಡೇಲಿ, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರಕ್ಕೆ ಒಂದೇ ಒಂದು ಪ್ರಶಸ್ತಿ ಬಂದಿಲ್ಲ. ಇದು ರಾಜಕೀಯ ಅಥವಾ ಆಳುವವರ ಒತ್ತಡವೋ, ಸಚಿವರ, ಶಾಸಕರ ಹಸ್ತಕ್ಷೇಪವೋ ಸ್ಪಷ್ಟಪಡಿಸಬೇಕಾಗಿದೆ ಎಂದು ವಾಸರೆ ಹೇಳಿದ್ದಾರೆ.

ಜತೆಗೆ ಸಮಾಜ ಸೇವೆ ವಿಭಾಗಕ್ಕೊಂದೇನೇ ನಾಲ್ಕು ಪ್ರಶಸ್ತಿಗಳನ್ನು ನೀಡಲಾಗಿದ್ದು, ರಂಗಭೂಮಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಯಾವುದೇ ಸಂಘಟನೆಗಳಿಗೆ ಪ್ರಶಸ್ತಿಯನ್ನು ನೀಡಿಲ್ಲ. ನಮ್ಮ ಜಿಲ್ಲೆಯಿಂದ ಹೊರಗಿರುವ ವ್ಯಕ್ತಿಗಳಿಗೂ ಪ್ರಶಸ್ತಿಯನ್ನು ನೀಡಲಾಗಿದೆ. ಅದರ ಜತೆಗೆ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲಾಖೆ ಮತ್ತು ಇಲಾಖೆ ಅಧಿಕಾರಿಗಳಿಗೆ ನೀಡಿರಲಿಲ್ಲ. (ಆವರಿಗೆ ಸರ್ವೋತ್ತಮ ಪ್ರಶಸ್ತಿಗಳು ಬೇರೆ ಸಂದರ್ಭದಲ್ಲಿರುತ್ತವೆ) ಈ ವರ್ಷ ಇಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಇಲಾಖೆ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯಲ್ಲೂ ಹಲವು ತಾಲೂಕುಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿರುವರಲ್ಲಿ ಕೆಲವರು ಯೋಗ್ಯರು ಮತ್ತು ಪ್ರಶಸ್ತಿಗೆ ಅರ್ಹತೆಯಿದ್ದವರಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಇದು ಪ್ರಶಸ್ತಿಗೆ ಆಯ್ಕೆಯಾದವರ ಬಗೆಗಿನ ಅಸಮಾಧಾನವಲ್ಲ. ಜಿಲ್ಲಾಧಿಕಾರಿ ನಡೆಯ ಬಗೆಗಿನ ಆಕ್ಷೇಪ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದು ಬಿ.ಎನ್. ವಾಸರೆ ಹೇಳಿದರು.

Share this article