ಡೊಳ್ಳು ಕುಣಿತದ ಗಾರುಡಿಗ ಕಾರಮಂಚಪ್ಪಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork | Published : Nov 1, 2023 1:00 AM

ಸಾರಾಂಶ

ಡೊಳ್ಳು ಕುಣಿತದಲ್ಲಿ ಕಾರಮಂಚಪ್ಪನವರಿಗೆ ಅರ್ಧ ಶತಮಾನದಷ್ಟು ಅನುಭವವಿದೆ. ಹೀಗಾಗಿ ಅವರ ಕುಣಿತದಲ್ಲಿ ವೈವಿಧ್ಯತೆ ಮನೆ ಮಾಡಿದೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಜಾನಪದ ಲೋಕದ ಕಲೆ ಡೊಳ್ಳು ಕುಣಿತದ ಕಲಾವಿದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ಡೊಳ್ಳು ವಾದ್ಯ ಕಲಾವಿದ ಎಚ್.ಕೆ. ಕಾರಮಂಚಪ್ಪ ಅವರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದ್ದು, ಡೊಳ್ಳು ಕುಣಿತದ ಕಲಾವಿದರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಮಲಪನಗುಡಿ ಗ್ರಾಮದಲ್ಲಿ ಕಾರಮಂಚಪ್ಪ ಅವರು 1951ರ ಏ. ೧೦ರಂದು ಜನಿಸಿದರು. ಅವರಿಗೆ ಈಗ ಬರೋಬ್ಬರಿ ಎಪ್ಪತ್ಮೂರು ವರ್ಷ. ಎರಡನೆಯ ಇಯತ್ತೆಯವರೆಗೆ ಮಾತ್ರ ವಿದ್ಯಾಭ್ಯಾಸ. ಹನ್ನೆರಡು ವರ್ಷದ ಬಾಲಕನಾಗಿದ್ದಾಗಲೇ ಡೊಳ್ಳು ಕುಣಿತಕ್ಕೆ ಮಾರುಹೋಗಿ ತನ್ನ ಮುತ್ತಪ್ಪ, ಅಜ್ಜಿ, ತಂದೆಯವರಿಂದ ಬಳುವಳಿಯಾಗಿ ಬಂದ ಡೊಳ್ಳು ಕುಣಿತವನ್ನು ಕಲಿತರು. ಈ ಕುಣಿತದಲ್ಲಿ ಕಾರಮಂಚಪ್ಪನವರಿಗೆ ಅರ್ಧ ಶತಮಾನದಷ್ಟು ಅನುಭವವಿದೆ. ಹೀಗಾಗಿ ಅವರ ಕುಣಿತದಲ್ಲಿ ವೈವಿಧ್ಯತೆ ಮನೆ ಮಾಡಿದೆ.

ಡೊಳ್ಳು ಕುಣಿತದ ವೈಶಿಷ್ಟ್ಯ:

ಡೊಳ್ಳು ಕುಣಿತದಲ್ಲಿ ಸಣ್ಣದಿಮ್ಮಿ, ದೊಡ್ಡದಿಮ್ಮಿ, ಜೋಡು ಬಡಿತ, ಎರಡು ಹೆಜ್ಜೆ ಕುಣಿತ, ಕುಕ್ಕರ ಬಡಿತ, ಮಂಡಿಗಾಳಿ ಕುಣಿತ, ಒಂಟಿ ಗುಣಿತ, ಎರಡು ಗುಣಿ, ಹರಿವಾಲಗ... ಹೀಗೆ ಅನೇಕ ಪಟ್ಟುಗಳನ್ನು ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದನ್ನು ನೋಡುವುದೇ ಒಂದು ಚೆಂದ. ದೊಡ್ಡದಾದ ಡೊಳ್ಳನ್ನು ಹೊಟ್ಟೆಯ ಮೇಲೆ ಕಟ್ಟಿಕೊಂಡು ಅಗತಕ್ಕೆ ನಿಂತುಕೊಂಡರೆ ಕಾರಮಂಚಪ್ಪನವರು ಮೈಯಲ್ಲಿ ದೇವರು ಬಂದವರ ಹಾಗೆ ತಲ್ಲೀನರಾಗಿ ಬಿಡುತ್ತಾರೆ. ಇಳಿವಯಸ್ಸಿನಲ್ಲಿಯೂ ಡೊಳ್ಳು ಕಟ್ಟಿಕೊಂಡು ಕುಣಿಯುವುದೆಂದರೆ ಇವರಿಗೆ ಹಿಗ್ಗು. ಇಳಿವಯಸ್ಸಿನಲ್ಲೂ ಡೊಳ್ಳು ಕಟ್ಟಿಕೊಂಡು ಕುಣಿಯುತ್ತಾರೆ.

ಒಲಿದ ಪ್ರಶಸ್ತಿಗಳು:

ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ನಾಡಿನ ವಿವಿಧೆಡೆ ಡೊಳ್ಳು ಕುಣಿತ ಪ್ರದರ್ಶನ ಮಾಡಿದ್ದಾರೆ. ತನ್ನ ಮಕ್ಕಳಾದ ಪ್ರಕಾಶ, ಆಂಜನೇಯ, ಮೊಮ್ಮಕ್ಕಳಾದ ಉಲ್ತಿಗೌಡ, ಅಭಿಷೇಕ, ಜಯಲಕ್ಷ್ಮೀ, ಭೂಮಿಕಾ ಅವರೊಂದಿಗೆ ಡೊಳ್ಳು ಕಟ್ಟಿಕೊಂಡು ಹೆಜ್ಜೆ ಹಾಕುತ್ತಾರೆ. ಇವರ ಇಡೀ ಕುಟುಂಬವೇ ಈಗಲೂ ಡೊಳ್ಳು ಕುಣಿತದಲ್ಲಿ ತೊಡಗಿಸಿಕೊಂಡಿದೆ. ಮಲಪನಗುಡಿಯಲ್ಲಿ ಕಾರಮಂಚಪ್ಪ ಡೊಳ್ಳು ಕುಣಿತದ ತಾತಾ ಎಂದೇ ಹೆಸರುವಾಸಿಯಾಗಿದ್ದಾರೆ. ಇವರು ರಾಜ್ಯದ ವಿವಿಧ ಉತ್ಸವಗಳಲ್ಲಿ ಡೊಳ್ಳು ಕುಣಿತದ ಕಲೆ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ, ದಿಲ್ಲಿ, ಹರ್ಯಾಣ, ರಾಜಸ್ಥಾನ, ಗುಜರಾತ್‌, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಈ ಗಟ್ಟಿ ಕಲೆಯನ್ನು ಪ್ರದರ್ಶನ ನೀಡಿದ್ದಾರೆ.

ಕಾರಮಂಚಪ್ಪನವರ ಕಲೆಯನ್ನು ಮೆಚ್ಚಿ 2016ರ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿತ್ತು. ರಾಮನಗರ ಜಾನಪದ ಲೋಕ ಪ್ರಶಸ್ತಿ, ವಿಜಯಪುರದಿಂದ ಬಸವರತ್ನ ಪ್ರಶಸ್ತಿ, ಅಲ್ಲದೇ ವಿವಿಧ ಸಂಘಸಂಸ್ಥೆಗಳು ನೀಡುವ ಜನಪದಶ್ರೀ, ಸಮಾಜ ಸೇವಾ ಭಾರ್ಗವ ಪ್ರಶಸ್ತಿ, ಮುಜರಾಯಿ ಇಲಾಖೆ ದಸರಾ ಮಹೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಿದೆ.

ಕಲೆಯನ್ನು ಬಚ್ಚಿಟ್ಟುಕೊಳ್ಳದೇ ಧಾರೆ ಎರೆಯಬೇಕೆಂಬ ಆಶಯ ಹೊಂದಿರುವ ಕಾರಮಂಚಪ್ಪನವರು ಈಗಲೂ ಹದಿಹರೆಯದ ಹುಡುಗರಿಗೆ ಡೊಳ್ಳು ಕುಣಿತದ ಪಾಠ ಹೇಳಿಕೊಡುತ್ತಿದ್ದಾರೆ. ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಯುವ ಕಲಾವಿದರು ಆಗಮಿಸಿ, ಡೊಳ್ಳು ಕುಣಿತದ ಪಟ್ಟುಗಳನ್ನು ಕಲಿಯುತ್ತಾರೆ. ಇವರ ಇಡೀ ಕುಟುಂಬವೇ ಕಲೆಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ.

ಸಂತಸ ತಂದಿದೆ:

ಡೊಳ್ಳು ಕುಣಿತವನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇಡೀ ಡೊಳ್ಳು ಕುಣಿತದ ಕಲಾಲೋಕಕ್ಕೆ ಈ ಪ್ರಶಸ್ತಿ ಸಮರ್ಪಿಸುವೆ. ನಮ್ಮಂಥ ಬಡ ಕಲಾವಿದರನ್ನು ಇಳಿ ವಯಸ್ಸಿನಲ್ಲಿ ಗುರುತಿಸಿ ಪ್ರಶಸ್ತಿ ನೀಡಿರುವುದು ಈ ಕಲೆಯನ್ನು ಉಳಿಸಿ, ಬೆಳೆಸಲು ಇನ್ನಷ್ಟು ಪ್ರೇರಣೆ ನೀಡಲಿದೆ ಎಂದರು ಎಚ್‌.ಕೆ. ಕಾರಮಂಚಪ್ಪ.

Share this article