ಯಕ್ಷಗಾನ ಶೈಲಿಯ ನೃತ್ಯ ಕಣ್ಣಿಗೆ ಹಬ್ಬ
ಕನ್ನಡಪ್ರಭ ವಾರ್ತೆ ಭಟ್ಕಳಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವು ಗಮನ ಸೆಳೆಯಿತು.
ತಾಲೂಕು ಆಡಳಿತ, ತಾಪಂ, ಪುರಸಭೆ ಭಟ್ಕಳ ಹಾಗೂ ಪಪಂ ಜಾಲಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನ್ಯೂ ಇಂಗ್ಲಿಷ್ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಈ ಸಾಂಸ್ಕೃತಿಕ ಸಂಜೆಗೆ ಸಾರ್ವಜನಿಕರಿಂದ ಅಪಾರ ಪ್ರತಿಕ್ರಿಯೆ ದೊರಕಿತು.ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೌಕರರು ಹಾಗೂ ವಿದ್ಯಾರ್ಥಿಗಳು ಕನ್ನಡ ಪರ ಅಭಿಮಾನವನ್ನು ನೃತ್ಯ, ನಾಟಕ ಮತ್ತು ಗೀತೆಗಳ ಮೂಲಕ ನಡೆಸಿಕೊಟ್ಟರು.
ಕಂದಾಯ ಇಲಾಖೆಯ ಉಪತಹಶೀಲ್ದಾರ ರಜಿನಿ ದೇವಡಿಗ ಹಾಗೂ ಗ್ರಾಮ ಆಡಳಿತ ಅಧಿಕಾರಿ ವಂದನ ನಾಯ್ಕ ‘ರಂಗೀತರಂಗ’ ಚಿತ್ರದ “ಹೇಳಿ ಚೆಲುವೆ” ಗೀತೆಗೆ ನೀಡಿದ ಯಕ್ಷಗಾನ ಶೈಲಿಯ ನೃತ್ಯ ಕಣ್ಣಿಗೆ ಹಬ್ಬವಾಗಿತ್ತು. ಪ್ರೇಕ್ಷಕರು ಚಪ್ಪಾಳೆಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿದ್ರಮನೆ ವಿದ್ಯಾರ್ಥಿಗಳ ಕಿರು ನಾಟಕ, ವಿದ್ಯಾಭಾರತಿ ಶಾಲೆಯ ಚೆಲ್ಲಿದರು ಮಲ್ಲಿಗೆಯ ಜಾನಪದ ನೃತ್ಯ, ಸೆಂಟ್ ಥಾಮಸ್ ಶಾಲೆಯ ರಾಮಾಯಣ ರೂಪಕ ನೃತ್ಯ ಹಾಗೂ ಶಿಕ್ಷಕಿಯರ ತಂಡದ ಜಾನಪದ ಗೀತೆಗಳು ಪ್ರೇಕ್ಷಕರ ಮನರಂಜಿಸಿತು. ಕೊನೆಯಲ್ಲಿ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ತಮ್ಮ ಸಹೋದ್ಯೋಗಿಗಳ ಜೊತೆ ವೇದಿಕೆಗೆ ಬಂದು ಭರ್ಜರಿ ನೃತ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ನ್ಯೂ ಇಂಗ್ಲಿಷ್ ಪಿಯು ಕಾಲೇಜು ಪ್ರಾಂಶುಪಾಲ ವೀರೇಂದ್ರ ಶಾನಭಾಗ್, ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ, ಕಾರ್ಯದರ್ಶಿ ವೆಂಕಟೇಶ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ಶಿರಾಲಿ ಮುಂತಾದವರಿದ್ದರು.