ಜನಪದ ಕಲೆಯನ್ನೇ ಬದುಕಿನ ಉಸಿರಾಗಿಸಿಕೊಂಡು, ಬರೋಬ್ಬರಿ 5 ದಶಕಗಳಿಗೂ ಹೆಚ್ಚು ಕಾಲ ಬಂಜಾರ ಜಾನಪದ, ಸಾಹಿತ್ಯ ಹಾಗೂ ನಗಾರಿ ಭಜನೆಯ ಮೂಲಕ ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸಿದ ಗದಗ ತಾಲೂಕಿನ ನಾಗಾವಿ ತಾಂಡಾದ ಹಿರಿಯ ಕಲಾವಿದ ಪಾಂಡಪ್ಪ ದೇವಲಪ್ಪ ಲಮಾಣಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನಗಾರಿ ಭಜನೆ, ಗಂಗಾಳ ಭಜನೆ, ಹೋಳಿ ಲೇಂಗಿ, ದುಂಡಲೇಂಗಿ ಸೇರಿದಂತೆ ಬಂಜಾರ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಎತ್ತಿದ ಕೈ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗ
ಜನಪದ ಕಲೆಯನ್ನೇ ಬದುಕಿನ ಉಸಿರಾಗಿಸಿಕೊಂಡು, ಬರೋಬ್ಬರಿ 5 ದಶಕಗಳಿಗೂ ಹೆಚ್ಚು ಕಾಲ ಬಂಜಾರ ಜಾನಪದ, ಸಾಹಿತ್ಯ ಹಾಗೂ ನಗಾರಿ ಭಜನೆಯ ಮೂಲಕ ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸಿದ ಗದಗ ತಾಲೂಕಿನ ನಾಗಾವಿ ತಾಂಡಾದ ಹಿರಿಯ ಕಲಾವಿದ ಪಾಂಡಪ್ಪ ದೇವಲಪ್ಪ ಲಮಾಣಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
1937ರ ಜ. 1ರಂದು ಜನಿಸಿದ ಪಾಂಡಪ್ಪ ದೇವಲಪ್ಪ ಲಮಾಣಿ ಅವರು, ದೇವಲಪ್ಪ ಠಾಕರಪ್ಪ ಲಮಾಣಿ ಹಾಗೂ ಗಂಗವ್ವ ಅವರ ಪುತ್ರ. ಪತ್ನಿ ಸೀತವ್ವ ಅವರೊಂದಿಗೆ ತುಂಬು ಜೀವನ ನಡೆಸುತ್ತಿರುವ ಇವರು, ತಮ್ಮ ಜೀವನದ ಬಹುಪಾಲು ಸಮಯವನ್ನು ಕಲಾಸೇವೆ ಹಾಗೂ ಸಮಾಜದ ಸಾಂಸ್ಕೃತಿಕ ಜಾಗೃತಿಗಾಗಿ ಮೀಸಲಿಟ್ಟಿದ್ದಾರೆ.
ಬಂಜಾರ ಸಮುದಾಯದ ಶ್ರೀಮಂತ ಪರಂಪರೆ, ಸಂಸ್ಕಾರ, ಆಚರಣೆಗಳು ಹಾಗೂ ಜಾನಪದ ಕಲೆಗಳನ್ನು ಜನಮಾನಸಕ್ಕೆ ತಲುಪಿಸುತ್ತಲೇ ಬಂದಿದ್ದಾರೆ. ತಮ್ಮದೇ ಆದ ವಿಶಿಷ್ಟ ಗಾಯನ ಶೈಲಿಯ ಮೂಲಕ ಗುರುತಿಸಿಕೊಂಡಿದ್ದಾರೆ. ನಗಾರಿ ಭಜನೆ, ಗಂಗಾಳ ಭಜನೆ, ಹೋಳಿ ಲೇಂಗಿ, ದುಂಡಲೇಂಗಿ ಸೇರಿದಂತೆ ಬಂಜಾರ ಸಮುದಾಯದ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಜೀವಂತವಾಗಿಡುವಲ್ಲಿ ಇವರ ಕೊಡುಗೆ ಮಹತ್ವದ್ದಾಗಿದೆ.
ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲಿ ಗಂಗಾಳ ಭಜನೆ ಸ್ಪರ್ಧೆಯಲ್ಲಿ ಪ್ರಥಮ, ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಸೇವಾಲಾಲರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡುವ ಮೂಲಕ ಸಮುದಾಯದ ಇತಿಹಾಸ ಮತ್ತು ಮಹಾತ್ಮರ ಸಂದೇಶವನ್ನು ಜನರಿಗೆ ಪರಿಚಯಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿಯಲ್ಲಿ ನಡೆದ ಹೋಳಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಂಪ್ರದಾಯಿಕ ಹೋಳಿ ಲೇಂಗಿ ಹಾಗೂ ದುಂಡಲೇಂಗಿ ಹಾಡುಗಳ ಮೂಲಕ ಜನಮನ ಗೆದ್ದಿದ್ದಾರೆ. ಅಲ್ಲದೆ, ರಾಷ್ಟ್ರೀಯ ಮಟ್ಟದ ಹೋಳಿ ಲೇಂಗಿ ಗಾಯನದ ಮೂಲಕ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಬಂಜಾರ ಸಂಸ್ಕಾರ ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಬಂಜಾರ ಸಂಸ್ಕೃತಿ, ಪರಂಪರೆ, ಗುರುಗಳು ಹಾಗೂ ವಿವಿಧ ಕಲಾಪ್ರಕಾರಗಳ ಪರಿಚಯಕ್ಕೂ ಸಾಹಿತ್ಯಿಕ ಕೊಡುಗೆ ನೀಡಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ಅನೇಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಪುರಸ್ಕಾರ ಮತ್ತು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
ಸಾಧನೆ ಮಾದರಿ
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಜಾನಪದ ಕಲೆಗಳು ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ, ಅವುಗಳನ್ನು ತಮ್ಮ ಗಾಯನದ ಮೂಲಕ ಜೀವಂತವಾಗಿರಿಸಿಕೊಂಡು ಬಂದಿರುವ ಪಾಂಡಪ್ಪ ಲಮಾಣಿ ಅವರ ಸಾಧನೆ ಮಾದರಿಯಾಗಿದೆ. ಕಲೆಗೆ ವಯಸ್ಸಿನ ಮಿತಿಯಿಲ್ಲ, ಕಲಾಸೇವೆಗೆ ನಿವೃತ್ತಿಯಿಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿರುವ ಇವರು, ಬಂಜಾರ ಸಮುದಾಯದ ಸಾಂಸ್ಕೃತಿಕ ಪರಂಪರೆಯ ಜೀವಂತ ಕೊಂಡಿಯಾಗಿದ್ದಾರೆ. 5 ದಶಕಗಳಿಗೂ ಮೀರಿದ ಇವರ ನಿರಂತರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಕೇವಲ ಒಬ್ಬ ವ್ಯಕ್ತಿಗೆ ಸಂದ ಗೌರವವಲ್ಲ; ಬದಲಾಗಿ ಬಂಜಾರ ಜಾನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ದೊರೆತ ರಾಜ್ಯಮಟ್ಟದ ಮಾನ್ಯತೆಯಾಗಿದೆ.
ಬಂಜಾರ ಜಾನಪದ, ಸಾಹಿತ್ಯ ಹಾಗೂ ನಗಾರಿ ಭಜನೆಯ ಮೂಲಕ ಕಲಾಸೇವೆ ಮಾಡುತ್ತ ಬಂದಿದ್ದೇನೆ. ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಸಂಸ್ಕೃತಿ, ಸಂಪ್ರದಾಯ ಮತ್ತು ಜಾನಪದ ಕಲೆಗಳು ಮುಂದಿನ ಪೀಳಿಗೆಗೂ ತಲುಪಬೇಕು ಎಂಬುದೇ ನನ್ನ ಆಶಯ. ಅನೇಕ ಊರುಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿ ಸಂತೋಷ ತಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.