ಕನ್ನಡಪ್ರಭ ವಾರ್ತೆ ಖಾನಾಪುರ
ಹಳೆಯ ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಸರ್ವೋದಯ ಶಾಲೆಯ ಮೈದಾನದಲ್ಲಿ ಸಂಪನ್ನಗೊಂಡಿತು. ಪಟ್ಟಣದ ವಿವಿಧ ಶಾಲಾ ಕಾಲೇಜುಗಳ 7 ರೂಪಕಗಳು, ಹಾಗೂ ರಾಜ್ಯೋತ್ಸವ ಸಮಿತಿಯ ಬ್ಯಾಂಡ್, ಕರಡಿ ಮಜಲು, ರಾಷ್ಟ್ರನಾಯಕರು, ಕನ್ನಡ ಹೋರಾಟಗಾರರು ಮತ್ತು ಕವಿಗಳ ವೇಷಧಾರಿ ಮಕ್ಕಳು ರಾಜ್ಯೋತ್ಸವ ಮೆರವಣಿಗೆಯ ಮುಖ್ಯ ಆಕರ್ಷಣೆಗಳಾಗಿದ್ದವು. ಮೆರವಣಿಗೆಯುದ್ದಕ್ಕೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಕನ್ನಡಾಭಿಮಾನವನ್ನು ಸೂಚಿಸುವ ಜನಪ್ರಿಯ ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕಿದ ಕುಣಿದು ಕುಪ್ಪಳಿಸಿದರು. ಛತ್ರಪತಿ ಶಿವಾಜಿ ವೃತ್ತದಲ್ಲಿ ಕನ್ನಡಾಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.ನಂತರ ಪಟ್ಟಣದ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ವಿಠ್ಠಲ ಹಿಂಡಲಕರ ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ನಿತ್ಯೋತ್ಸವವಾಗಬೇಕು. ವರ್ಷದ ಹನ್ನೆರಡೂ ತಿಂಗಳು ಕನ್ನಡದ ಅಸ್ತಿತ್ವವನ್ನು ಉಳಿಸಿ ಬೆಳೆಸಲು ಗಡಿಭಾಗದ ಕನ್ನಡಿಗರು ಒಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರವಿ ಕಾಡಗಿ, ಚಂಬಣ್ಣ ಹೊಸಮನಿ, ಎನ್.ಬಿ ಮಂಡಿ, ಅಪ್ಪಯ್ಯ ಕೋಡೊಳಿ, ಮಲ್ಲೇಶಿ ಪೋಳ, ಮೇಘಾ ಕುಂದರಗಿ, ಸಲೀಂ ನಾಯ್ಕ ರಾಜೇಶ್ವರಿ ಕುಡಚಿ, ವಿ.ಎಂ ನಾನಗೂರ, ಗಿರೀಶ ಕುರಹಟ್ಟಿ, ಎನ್.ಸಿ ತಳವಾರ, ದಶರಥ ಬನೋಶಿ, ಆರೋಗ್ಯಪ್ಪ ಪಾದನಕಟ್ಟಿ, ಭರತೇಶ ಜೋಳದ, ವೀರಭದ್ರ ಜವಳಿ, ದತ್ತಾತ್ರೇಯ ಪೂಜಾರ, ರಾಜು ಖಾತೇದಾರ, ಸಂದೀಪ ಮಾಳಗಿ, ಪ್ರೇಮಾನಂದ ನಾಯ್ಕ, ಬಸವರಾಜ ಬಡಿಗೇರ, ಶೃದ್ಧಾ ಪಾಟೀಲ, ರಾಜಶೇಖರ ಹಿಂಡಲಗಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಕನ್ನಡಪರ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಬಿ.ಎನ್ ಚಚಡಿ ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಕಮ್ಮಾರ ಸ್ವಾಗತಿಸಿದರು. ಮನಗೂಳಿ ವಂದಿಸಿದರು.ಮರಾಠಾ ಮಂಡಳ ಪ್ರೌಢಶಾಲೆಯ ರೂಪಕಕ್ಕೆ ಪ್ರಥಮ ಸ್ಥಾನಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾತಂಡಗಳಿಗೆ ಹಾಗೂ ರೂಪಕಗಳಿಗೆ ಬಹುಮಾನ ವಿತರಿಸಲಾಯಿತು. ಮರಾಠಾ ಮಂಡಳ ಪ್ರೌಢಶಾಲೆಯ ರೂಪಕಕ್ಕೆ ಪ್ರಥಮ, ಸ್ವಾಮಿ ವಿವೇಕಾನಂದ ಶಾಲೆಯ ರೂಪಕಕ್ಕೆ ದ್ವಿತೀಯ ಬಹುಮಾನ ಮತ್ತು ಉಳಿದ ರೂಪಕಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಕರವೇ ಸಂಘಟನೆಯಿಂದ ಅನ್ನಪ್ರಸಾದ ಸೇವೆರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಸರ್ವೋದಯ ಪ್ರೌಢಶಾಲೆಯ ಮೈದಾನದಲ್ಲಿ ಅನ್ನಪ್ರಸಾದ ವಿತರಿಸಲಾಯಿತು. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಜನರಿಗೆ ಕರವೇ ಮುಖಂಡರು ಮತ್ತು ಕಾರ್ಯಕರ್ತರು ರುಚಿಕರ ಅನ್ನ-ಸಾರು, ಶಿರಾ, ಪಲ್ಯ ಮತ್ತು ಉಪ್ಪಿನಕಾಯಿ ಬಡಿಸಿದರು.