ರಾಜ್ಯೋತ್ಸವ ಎಲ್ಲರ ನಿತ್ಯೋತ್ಸವ ಆಗಬೇಕು: ಶಾಸಕ ನಿಖಿಲ ಕತ್ತಿ

KannadaprabhaNewsNetwork |  
Published : Nov 24, 2024, 01:46 AM IST
ಕಲಾ ತಂಡಗಳ ವೈಭವ. | Kannada Prabha

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗರ ನಿತ್ಯೋತ್ಸವವಾಗಬೇಕು. ಈ ನಿಟ್ಟಿನಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾದ ಹುಕ್ಕೇರಿ ಕನ್ನಡದ ಕೆಲಸಗಳಿಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕರ್ನಾಟಕ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗರ ನಿತ್ಯೋತ್ಸವವಾಗಬೇಕು. ಈ ನಿಟ್ಟಿನಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾದ ಹುಕ್ಕೇರಿ ಕನ್ನಡದ ಕೆಲಸಗಳಿಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ಕಟ್ಟುವ ಕಾರ್ಯದಲ್ಲಿ ಹುಕ್ಕೇರಿ ತಾಲೂಕು ಬರುವ ದಿನಗಳಲ್ಲಿ ಐತಿಹಾಸಿಕ ಹೆಜ್ಜೆಗಳಿಗೆ ಕಾರಣವಾಗಬೇಕು. ಕನ್ನಡ ರಾಜ್ಯೋತ್ಸವ ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಪ್ರಗತಿಗೆ ಪೂರಕ ಮತ್ತು ಪ್ರೇರಕವಾಗಿದೆ ಎಂದು ಹೇಳಿದರು.

ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗಿರಬಾರದು. ಕನ್ನಡ ಉಳಿಸಿ ಬೆಳೆಸುವ ಕಾರ್ಯ ನಿತ್ಯ ನಿರಂತರವಾಗಬೇಕು. ಕನ್ನಡನಾಡಿನ ಹಿತಾಸಕ್ತಿ ಕಾಪಾಡುವಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ನಾಡಿಗೆ ಧಕ್ಕೆಯಾಗುವ ಪ್ರಸಂಗ ಸಹಿಸಲಾಗದು. ಕನ್ನಡದ ಮನಸ್ಸುಗಳು ಅನ್ಯ ಭಾಷಿಕರಿಗೆ ಎಂದಿಗೂ ನೋವು ತರಿಸುವ ಕೆಲಸ ಮಾಡಿಲ್ಲ ಎಂದು ಅವರು ಹೇಳಿದರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೂಪಕಗಳು ಮತ್ತು ಕಲಾ ತಂಡಗಳ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದ ಕ್ಯಾರಗುಡ್ಡ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಉದ್ಯಮಿ ಪವನ ಕತ್ತಿ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಸದಸ್ಯರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಎ.ಕೆ. ಪಾಟೀಲ, ಭೀಮಶಿ ಗೋರಖನಾಥ, ಚಂದು ಮುತ್ನಾಳೆ, ಸದಾಶಿವ ಕರೆಪ್ಪಗೋಳ, ಮಹಾಂತೇಶ ತಳವಾರ, ಮುಖಂಡರಾದ ಜಯಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಉದಯ ಹುಕ್ಕೇರಿ, ಸುಹಾಸ ನೂಲಿ, ಅಪ್ಪುಶ ತುಬಚಿ, ಮಧುಕರ ಕರನಿಂಗ, ಕುಮಾರ ಜುಟಾಳೆ, ಜ್ಯೋತಿಬಾ ದುಪ್ಪಟ್ಟಿ, ಪ್ರಜ್ವಲ ನಿಲಜಗಿ, ರಮೇಶ ಬೋಳಗಾಂವಿ, ರಾಜು ಅಂಕಲೆ, ಸಂತೋಷ ಸುಣಗಾರ, ವೈಭವ ಶಿವಮೊಗ್ಗಿಮಠ, ಸುಭಾಶ ಹಾವನ್ನವರ ಮತ್ತಿತರರು ಇದ್ದರು.

ಹೆಜ್ಜೆ ಹಾಕಿದ ಶಾಸಕ ನಿಖಿಲ್ ಕತ್ತಿ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಹುಕ್ಕೇರಿಯಲ್ಲಿ ಶನಿವಾರ ನಡೆದ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಕನ್ನಡದ ಕಹಳೆ ಮೊಳಗಿತು. ರಾಜ್ಯೋತ್ಸವದ ಮೆರಗು ಹೆಚ್ಚಿಸಲು ಮತ್ತು ಯುವ ಸಮೂಹವನ್ನು ಹುರಿದುಂಬಿಸಲು ಶಾಸಕ ನಿಖಿಲ್‌ ಕತ್ತಿ ಅವರು ಹಾಡಿಗೆ ಹೆಜ್ಜೆ ಹಾಕಿದರು. ಸ್ತಬ್ಧಚಿತ್ರ-ರೂಪಕಗಳು ಕನ್ನಡ ನಾಡಿನ ಗತವೈಭವ ಸಾರಿದವು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!